ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಂದ ಸೋಂಕು ಹರಡಿಲ್ಲ: ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ: ಡಿಸಿ ಜಿ.‌ ಜಗದೀಶ್ 

ಉಡುಪಿ: ಜಿಲ್ಲೆಯ ಎಸ್ಎಸ್ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಿಂದ ಕೊರೊನಾ ಸೋಂಕು ಹರಡಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ಹರಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಿಸ್ತುಬದ್ಧವಾಗಿ ಮತ್ತು ಸುರಕ್ಷಿತ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸೋಂಕು ಹರಡುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಐಸಿಯುನಲ್ಲಿದ್ದ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ:
ನಾಲ್ಕು ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂರು ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದರೂ ಆರೋಗ್ಯದಲ್ಲಿ ಶೇ. 25 ರಷ್ಟು ಸುಧಾರಣೆ ಕಂಡಿದೆ. ಗಂಭೀರ ಸ್ಥಿತಿಯಲ್ಲಿದ್ದ ಎಲ್ಲ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗುಡೆಯಾಗಿದ್ದಾರೆ. ಇದಕ್ಕೆ ನಮ್ಮ ಜಿಲ್ಲೆಯ ವೈದ್ಯರ ಪರಿಶ್ರಮವೇ ಮುಖ್ಯ ಕಾರಣ. ಇದೀಗ ಉಡುಪಿ ಮಾದರಿಯನ್ನು ಬೇರೆ ಜಿಲ್ಲೆಯವರು ಕೂಡ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಕೆಎಸ್ಆರ್ ಟಿಸಿ ಬಸ್ ಗಳ 600 ಕ್ಕೂ ಅಧಿಕ ಮಂದಿ ಚಾಲಕರು ಹಾಗೂ ನಿರ್ವಾಹಕರು, ಮಾಲ್ ಗಳಲ್ಲಿ ಕೆಲಸ ಮಾಡುವವರು, ಡೆಲಿವರಿ ಬಾಯ್ಸ್ ಗಳು, ಸೇಲ್ಸ್ ಮೆನ್ ಗಳು, ವ್ಯಾಪಾರಸ್ಥರು ಮತ್ತು ಖಾಸಗಿ ಬಸ್ ಚಾಲಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೀಚ್ ಗೆ ಮಕ್ಕಳು, ಹಿರಿಯರಿಗೆ ಪ್ರವೇಶವಿಲ್ಲ:
ಜಿಲ್ಲೆಯ ಬೀಚ್ ಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ‌ ನೀಡಲಾಗಿದ್ದು, ಮಕ್ಕಳು ಮತ್ತು ಹಿರಿಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ತುರ್ತು ಕೆಲಸವನ್ನು ಹೊರತುಪಡಿಸಿ ಹೊರಗಿನ ಪ್ರವಾಸಿಗರು ಕೂಡ ಜಿಲ್ಲೆಯ ಪ್ರಯಾಣವನ್ನು ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸೋಂಕು ಸಮುದಾಯವನ್ನು ಹರಡುವುದನ್ನು ತಡೆಯುವ ಉದ್ದೇಶದಿಂದ ಹೆಚ್ಚೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಹೇಳಿದರು.