ಹಿಜಾಬ್ ವಿವಾದ ನಿಲ್ಲಿಸಲು ಹೆಚ್ಚು ಹೊತ್ತು ಬೇಕಿಲ್ಲ, ಇದು ಹಿಂದೂ ಸಂಘಟನೆಗೆ ಐದು ನಿಮಿಷದ ಕೆಲಸ; ಯಶ್ ಪಾಲ್ ಸುವರ್ಣ ಎಚ್ಚರಿಕೆ

ಉಡುಪಿ: ಕಳೆದ ಒಂದು‌ ತಿಂಗಳನಿಂದ ಉಡುಪಿ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ನಿಲ್ಲಿಸಲು ಹೆಚ್ಚು ಹೊತ್ತು ಬೇಕಿಲ್ಲ. ಇದು ಹಿಂದೂ ಸಂಘಟನೆಗೆ ಐದು ನಿಮಿಷದ ಕೆಲಸ ಅಷ್ಟೇ ಎಂದು ಉಡುಪಿ ಸರಕಾರಿ ಬಾಲಕಿಯರ ಕಾಲೇಜು ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.

ಹಿಜಾಬ್ ವಿವಾದದ ಕುರಿತು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗೊಂದಲ ನಿಲ್ಲಿಸಲು ನಮ್ಮ ಸಂಘಟನೆಗೆ ಐದು ನಿಮಿಷದ ಕೆಲಸ. ಆದರೆ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯನಾಗಿ ಉಳಿದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸಿಎಫ್ಐ, ಪಿಎಫ್ ಐ ಸಂಘಟನೆಯ ಕುಮ್ಮಕ್ಕಿನಿಂದ ಈ ವಿವಾದ ನಡೆಯುತ್ತಿದೆ. ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರಿಂದ 900 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಸವಾಲು ಹಾಕಿಕೊಂಡು ಗೊಂದಲ ಉಂಟು ಮಾಡುತ್ತಿದ್ದಾರೆ. ಇದನ್ನು‌ ನಿಲ್ಲಿಸುವ ಶಕ್ತಿ‌ ಸಂಘಟನೆಗೆ ಇದೆ. ಸೂಕ್ತ ಸಮಯದಲ್ಲಿ ಹಿಂದು ಸಂಘಟನೆಯ ಮೂಲಕ ಸರಿಯಾದ ಉತ್ತರ ಕೊಡಲು ನಮಗೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.