ಎರಕಹೊಯ್ದ ಕಬ್ಬಿಣದ ಅಡುಗೆ ಪಾತ್ರೆಗಳ ಶಾಖವನ್ನು ಉಳಿಸಿಕೊಳ್ಳುವ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿವೆ. ಕಾಸ್ಟ್ ಐರನ್ ಅಥವಾ ಎರಕಹೊಯ್ದ ಕಬ್ಬಿಣದ ಅಡುಗೆ ಪಾತ್ರೆಗಳು ಇತ್ತೀಚಿನ ದಿನಗಳಲ್ಲಿ ತನ್ನ ಆರೋಗ್ಯ ಪ್ರಯೋಜನಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಭಾರತದಲ್ಲಿ ಬಹಳ ಹಿಂದಿನ ಕಾಲದಿಂದಲೂ ಅಡುಗೆಗಾಗಿ ಮಣ್ಣಿನ ಅಥವಾ ಪರಿಶುದ್ದ ಕಬ್ಬಿಣದಿಂದ ಮಾಡಲಾದ ಅಡುಗೆ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಆದರೆ ಪಾಶ್ಚಾತ್ಯ ಪ್ರಭಾವದಿಂದ ಮಣ್ಣಿನ ಮಡಕೆಗಳು ಮತ್ತು ಕಬ್ಬಿಣದ ಪಾತ್ರೆಗಳು ಮೂಲೆಗುಂಪಾಗಿ ನಾನ್ ಸ್ಟಿಕ್ ಕುಕ್ ವೇರ್ ಗಳು ಹೆಚ್ಚು ಮುನ್ನೆಲೆಗೆ ಬಂದವು.
ಆದರೀಗ, ನಾನ್ ಸ್ಟಿಕ್ ಪಾತ್ರಗಳು ಅತಿ ಹೆಚ್ಚು ವಿಷಕಾರಿಯಾಗಿದ್ದು, ಇವು ಕ್ಯಾನ್ಸರ್ ಸೇರಿದಂತೆ ತರಹೇವಾರಿ ಆರೋಗ್ಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತಿರುವ ಬಗ್ಗೆ ಅಧ್ಯಯನ ವರದಿಗಳಾಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಎಂಬ ಸಂಸ್ಥೆಯು ನಾನ್ ಸ್ಟಿಕ್ ಕುಕ್ ವೇರ್ ನಲ್ಲಿರುವ ಪರ್ಫ್ಲೋರೊಕ್ಟಾನೋಯಿಕ್ ಆಮ್ಲ, ಅಥವಾ PFOA ಎಂಬ ಅಂಶವು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದಿದೆ.
ನಾನ್ ಸ್ಟಿಕ್ ಪಾತ್ರೆಗಳು ಅತಿ ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ ಇದರಿಂದ ಹೊರಡುವ ರಾಸಾಯನಿಕಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಎರಕಹೊಯ್ದ ಕಬ್ಬಿಣದ ಪಾತ್ರೆಯ ಪ್ರಯೋಜನಗಳು
ಎರಕಹೊಯ್ದ-ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದು ನಿಮ್ಮ ಆಹಾರದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ಸಸ್ಯಾಹಾರಿಗಳು ಕಬ್ಬಿಣದ ಕೊರತೆಗೆ ಹೆಚ್ಚು ಒಳಗಾಗುತ್ತಾರೆ. ಎರಕಹೊಯ್ದ ಕಬ್ಬಿಣದ ಬಳಕೆಯು ಆಹಾರದಲ್ಲಿನ ಕಬ್ಬಿಣದ ಮಟ್ಟವನ್ನು ನಿಜವಾಗಿಯೂ ಪ್ರಭಾವಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಆದಾಗ್ಯೂ, ಎಷ್ಟು ಕಬ್ಬಿಣವನ್ನು ವರ್ಗಾಯಿಸಲಾಗುತ್ತದೆ ಮತ್ತು ನಿಮ್ಮ ದೇಹವು ಎಷ್ಟು ಹೀರಿಕೊಳ್ಳುತ್ತದೆ ಎಂಬುದು ಚರ್ಚಾರ್ಹ ವಿಷಯ.
ಅಮೇರಿಕನ್ ಡಯೆಟಿಕ್ ಅಸೋಸಿಯೇಷನ್ ಜರ್ನಲ್ ನ ಪ್ರಕಾರ ಕಬ್ಬಿಣದ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ವಸ್ತುಗಳಲ್ಲಿ ಕಬ್ಬಿಣದ ಅಂಶ ಗಣನೀಯವಾಗಿ ಹೆಚ್ಚಾಗುತ್ತದೆ. ಹೆಚ್ಚು ತೇವಾಂಶ, ಹೆಚ್ಚು ಆಮ್ಲೀಯತೆ ಮತ್ತು ಅಡುಗೆಗೆ ಹೆಚ್ಚಿನ ಸಮಯ ವ್ಯಯಿಸುವ ಆಹಾರಗಳನ್ನು ಕಬ್ಬಿಣದ ಪಾತ್ರೆಗಳಲ್ಲಿ ತಯಾರಿಸುವಾಗ ಕಬ್ಬಿಣದ ಅಂಶವನ್ನು ಹೆಚ್ಚಿಸುತ್ತವೆ ಎಂದು ಅಧ್ಯಯನವು ತೀರ್ಮಾನಿಸಿದೆ.
ಅಲ್ಲದೆ, ತುಂಬಾ ಹಳೆಯದಾದ ಕಬ್ಬಿಣದ ಪಾತ್ರೆಗಳಲ್ಲಿ ಬೇಯಿಸಿದ ಆಹಾರ ಪದಾರ್ಥಗಳಲ್ಲಿರುವ ಕಬ್ಬಿಣ ಅಂಶವು ಹೊಸ ಪಾತ್ರೆಯಲ್ಲಿ ಬೇಯಿಸಿದ ಅಂಶಕ್ಕಿಂತ ತಕ್ಕಮಟ್ಟಿಗೆ ಕಡಿಮೆ ಇರುತ್ತದೆ ಎಂದು ಅಧ್ಯಯನ ಕಂಡುಕೊಂಡಿದೆ.
ದೇಹಕ್ಕೆ ಕಬ್ಬಿಣಾಂಶದ ಅಗತ್ಯ
ಕಬ್ಬಿಣವು ದೇಹದ ಬೆಳವಣಿಗೆಗೆ ಅಗತ್ಯವಾದ ಖನಿಜವಾಗಿದೆ. ಇದು ಶ್ವಾಸಕೋಶದಿಂದ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಆದ ಹಿಮೋಗ್ಲೋಬಿನ್ ಮತ್ತು ಸ್ನಾಯುಗಳಿಗೆ ಆಮ್ಲಜನಕವನ್ನು ಒದಗಿಸುವ ಮಯೋಗ್ಲೋಬಿನ್ ಎಂಬ ಪ್ರೋಟೀನ್ ಅನ್ನು ತಯಾರಿಸಲು ಕಬ್ಬಿಣದ ಅಂಶ ಅವಶ್ಯ.
ಕಬ್ಬಿಣವು ರಕ್ತವನ್ನು ಆಮ್ಲಜನಕಗೊಳಿಸಲು ಸಹಾಯ ಮಾಡುತ್ತದೆ.
ಕಬ್ಬಿಣವು ರಕ್ತದಲ್ಲಿನ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
ಕಬ್ಬಿಣವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಬ್ಬಿಣವು ಅರಿವಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ.
ಕಬ್ಬಿಣವು ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳಿಗಾಗಿ ಮುಖ್ಯ.
ಹಾಗಾಗಿ ಎರಕಹೊಯ್ದ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆಹಾರವು ರುಚಿಕರ ಮತ್ತು ಕಡಿಮೆ ಶ್ರಮದಾಯಕವೂ ಆಗಿರುತ್ತದೆ.
ವಿ.ಸೂ: ಈ ಲೇಖನ ಕೇವಲ ಮಾಹಿತಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ತಜ್ಞರ ಸಲಹೆ ಪಡೆಯುವುದು ಒಳಿತು.