ಮಲ್ಪೆ: ಈ ಹಿಂದೆ ಮಲ್ಪೆ ಬೀಚ್ನಲ್ಲಿ ಹೊಸ ತೇಲುವ ಸೇತುವೆಯನ್ನು ಸ್ಥಾಪಿಸಲಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಸೇತುವೆಯನ್ನು ಕಳಚಿಡಲಾಗಿತ್ತು. ಇದೀಗ ತೇಲುವ ಸೇತುವೆಯನ್ನು ಮತ್ತೆ ಸ್ಥಾಪಿಸಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತಮಾಡಲಾಗುವುದು ಎಂದು ವರದಿಯಾಗಿದೆ.
ಸೌಲಭ್ಯವು ವೀಕ್ಷಣೆಯಲ್ಲಿದ್ದು, ತಜ್ಞರ ತಂಡವು ತೇಲುವ ಸೇತುವೆಯ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಿ ದೃಢಪಡಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮಲ್ಪೆ ಬೀಚ್ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಮಾತನಾಡಿ, ಹಿಂದಿನ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವೆ. ಸೇತುವೆಯನ್ನು ಹೇಗೆ ಸರಿಪಡಿಸುವುದು ಮತ್ತು ಕಳಚುವುದು ಎಂಬುದರ ಕುರಿತು ನಮ್ಮ ತಂಡಕ್ಕೆ ತರಬೇತಿ ನೀಡಲಾಗಿದೆ. ನಾವು ಸಮುದ್ರದ ಸ್ಥಿತಿಯನ್ನು ಮತ್ತು ವಿಪರೀತ ಹವಾಮಾನ ಪರಿಸ್ಥಿತಿಗಳಲ್ಲಿ ಸೇತುವೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದರು.
ಕೇರಳದಿಂದ ತಜ್ಞರ ತಂಡ ಪರಿಶೀಲನೆಗೆ ಆಗಮಿಸಲಿದೆ ಎಂದ ಅವರು, ತಜ್ಞರ ತಂಡ ವರದಿ ಸಲ್ಲಿಸಿದ ನಂತರ ಅನುಮೋದನೆಗಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು. ಜಿಲ್ಲಾಡಳಿತದಿಂದ ಒಪ್ಪಿಗೆ ದೊರೆತ ನಂತರ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದರು.
ಮೇ ತಿಂಗಳಲ್ಲಿ ರಾಜ್ಯದ ಪ್ರಥಮ ತೇಲುವ ಸೇತುವೆಯನ್ನು ಮಲ್ಪೆಯಲ್ಲಿ ಸ್ಥಾಪಿಸಲಾಗಿದ್ದು, ಹಾಕಿದ ಮೂರೇ ದಿನಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣ ಸೇತುವೆ ಚೆಲ್ಲಾಪಿಲ್ಲಿಯಾಗಿತ್ತು. ಮಳೆಗಾಲದಲ್ಲಿ ಸೇತುವೆಯನ್ನು ಕಳಚಿಡಲಾಗಿತ್ತು. ಇದೀಗ ಮಳೆ ಕಡಿಮೆಯಾಗಿದ್ದು, ಸಮುದ್ರದ ವಾತಾವರಣವು ಸ್ನೇಹಿಯಾಗಿರುವ ಕಾರಣ ಸೇತುವೆಯನ್ನು ಮರುಸ್ಥಾಪಿಸಿ ಪ್ರವಾಸಿಗರಿಗೆ ಮನರಂಜನೆಯ ವ್ಯವಸ್ಥೆ ಮಾಡಲಾಗುತ್ತಿದೆ.