ಅನಾರೋಗ್ಯದಿಂದ ಬಳಲುತ್ತಿದ್ದಖ್ಯಾತ ಗಣಿತಶಾಸ್ತ್ರಜ್ಞೆ ಡಾ. ಮಂಗಳಾ ನಾರ್ಲಿಕರ್ ನಿಧನ

ಪುಣೆ(ಮಹಾರಾಷ್ಟ್ರ): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಹಾರಾಷ್ಟ್ರದ ಪುಣೆ ನಗರದ ತಮ್ಮನಿವಾಸದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಖ್ಯಾತ ಖಗೋಳ, ಭೌತಶಾಸ್ತ್ರಜ್ಞ ಡಾ.ಜಯಂತ್ ನಾರ್ಲಿಕರ್ ಅವರ ಪತ್ನಿ ಖ್ಯಾತ ಗಣಿತಶಾಸ್ತ್ರಜ್ಞೆ ಮತ್ತು ವಿಜ್ಞಾನಿ ಡಾ.ಮಂಗಳಾ ನಾರ್ಲಿಕರ್(80) ಅವರು ವಿಧಿವಶರಾಗಿದ್ದಾರೆ.

ಡಾ. ಮಂಗಳಾ ನಾರ್ಲಿಕರ್ ಅವರಿಗೆ ಕೆಲವು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆಯ ನಂತರ ಅವರು ಗುಣಮುಖರಾಗಿದ್ದರು. ಆದರೆ, ಆ ನಂತರ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದಿತು. ಅದಕ್ಕೆ ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಅವರು ಪತಿ, ಮೂವರು ಪುತ್ರಿಯರು ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ತನ್ನ ಪತಿಯೊಂದಿಗೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಿಂದ ಭಾರತಕ್ಕೆ ಬಂದ ನಂತರ, ಅವರು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬಳಿಕ ಬಾಂಬೆ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಗಣಿತದಲ್ಲಿ ಪಿಹೆಚ್​ಡಿ ಪಡೆದಿದ್ದಾರೆ. 1989ರಲ್ಲಿ ದಂಪತಿಗಳು ಪುಣೆಗೆ ತೆರಳಿದರು. ಅಲ್ಲಿ ಅವರು ಪುಣೆ ವಿಶ್ವವಿದ್ಯಾಲಯದ (ಈಗ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ) ಗಣಿತ ವಿಭಾಗದಲ್ಲಿ ಕೆಲಸ ಮಾಡಿದರು.

.ವೈವಾಹಿಕ ಜೀವನ ಮತ್ತು ವೃತ್ತಿ ಬದುಕು: ಡಾ.ಮಂಗಳಾ ಅವರು 1966ರಲ್ಲಿ ಭೌತಶಾಸ್ತ್ರಜ್ಞ ಡಾ.ಜಯಂತ್ ನಾರ್ಲಿಕರ್ ಅವರನ್ನು ವಿವಾಹವಾದರು. ಮದುವೆಯಾಗಿ 16 ವರ್ಷಗಳ ನಂತರ ಅವರು ತಮ್ಮ ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿದರು.

1964 ರಿಂದ 1966 ರವರೆಗೆ, ಡಾ ಮಂಗಳಾ ಅವರು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌(TIFR)ನ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ಸಂಶೋಧನಾ ವಿದ್ಯಾರ್ಥಿ ಮತ್ತು ಸಂಶೋಧನಾ ಸಹವರ್ತಿಯಾಗಿ ಕೆಲಸ ಮಾಡಿದರು.
1967 ರಿಂದ 1969 ರವರೆಗೆ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ.
1974 ರಿಂದ 1980 ರವರೆಗೆ ಅವರು ಮತ್ತೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್​ನ ಗಣಿತಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡಿದರು.
1989ರಲ್ಲಿ ದಂಪತಿಗಳು ಪುಣೆಗೆ ತೆರಳಿದರು. ಅಲ್ಲಿ ಅವರು ಪುಣೆ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಕೆಲಸ ಮಾಡಿದರು
ಡಾ. ಮಂಗಳಾ ಅವರ ಆಸಕ್ತಿಯ ಪ್ರಮುಖ ಕ್ಷೇತ್ರಗಳೆಂದರೆ ನೈಜ ಮತ್ತು ಸಂಕೀರ್ಣ ವಿಶ್ಲೇಷಣೆ, ವಿಶ್ಲೇಷಣಾತ್ಮಕ ರೇಖಾಗಣಿತ, ಸಂಖ್ಯೆ ಸಿದ್ಧಾಂತ ಮತ್ತು ಬೀಜಗಣಿತ.
2002ರ ವಿಶ್ವನಾಥ ಪಾರ್ವತಿ ಗೋಖಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅವರ ಪಾರ್ಥೀವ ಶರೀರವನ್ನು ಇಲ್ಲಿನ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (IISER) ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ವೈಕುಂಠ ಚಿತಾಗಾರದಲ್ಲಿ ಇಂದು ರಾತ್ರಿ 11:30ರ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ