ಬೇಸಿಗೆಯಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸಲು ಮನೆಲೇ ಮಾಡಿ ಈ “ಫೇಸ್ ಪ್ಯಾಕ್”

ಚರ್ಮವು ಸ್ವಚ್ಛ, ನಿರ್ಮಲ ಮತ್ತು ಸುಂದರವಾಗಿರಬೇಕಾದರೆ, ನಮ್ಮ ಆಹಾರದಲ್ಲಿ ಪ್ರೋಟೀನ್, ಹಣ್ಣು ಮತ್ತು ತರಕಾರಿಗಳು ಹೇರಳವಾಗಿರಬೇಕು. ಮುಖ್ಯವಾಗಿ ಚಾಕ್ಲೇಟ್ ಮತ್ತು ಕೋಕೋದಿಂದ ತಯಾರಿಸಿದ ಯಾವುದೇ ಆಹಾರ, ಎಣ್ಣೆಯಲ್ಲಿ ಕರಿದ ಮತ್ತು ಅತಿ ಕೊಬ್ಬಿನ ಆಹಾರವನ್ನು ಮಿತವಾಗಿ ಸೇವಿಸಬೇಕು. ಸಮಯಕ್ಕೆ ಸರಿಯಾಗಿ ನಿದ್ದೆ ಹಾಗೂ ಆಹಾರವನ್ನು ಸೇವಿಸಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಅಂಕಣದಲ್ಲಿ ಸಿಲ್ವಿಯಾ ಕೊಡ್ದೆರೋ  ಕೊಟ್ಟ ಟಿಪ್ಸ್ ಇಲ್ಲಿದೆ

ಮುಖದ ಸೌಂದರ್ಯ ವನ್ನು ವೃದ್ಧಿಸಲು “ಫೇಸ್ ಪ್ಯಾಕ್ ” ನಂತಹ ಚಿಕಿತ್ಸೆ ಬೇರಾವುದೇ ಇಲ್ಲ. ಎಪಿಡರ್ಮಿಸ್ ದುರ್ಬಲವಾದಾಗ “ಫೇಸ್ ಪ್ಯಾಕ್ “ನ ಪ್ರಯೋಗ ಮಾಡಿದಾಗ  ಅದು ಮುಖಕ್ಕೆ  ಪುನರ್ ಚೈತನ್ಯ ಒದಗಿಸುತ್ತದೆ.

ಮನೆಯಲ್ಲೇ ಸರಳವಾಗಿ ಕೆಲವೊಂದು “ಫೇಸ್ ಪ್ಯಾಕ್ “ಗಳನ್ನು ಈ ರೀತಿ ತಯಾರಿಸಿ ಬಳಸಬಹುದು:

ಕ್ಯಾರೆಟ್ ಫೇಸ್ ಪ್ಯಾಕ್:

ಕ್ಯಾರೆಟ್ ನ ರಸ ತೆಗೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖ ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚತ್ತದೆ.

ಸೌತೆಕಾಯಿಯ ಫೇಸ್ ಪ್ಯಾಕ್:

ಒಂದು ಸ್ಪೂನ್ ಸೌತೆಕಾಯಿಯ ರಸ ಒಂದು ಟೀಸ್ಪೂನ್ ಹಾಲಿನ ಕೆನೆ ಮತ್ತು ಮೊಟ್ಟೆಯ ಬಿಳಿ ಲೋಳೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10-12 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮುಖದ ಜಿಡ್ಡಿನಂಶ ತೊಲಗಿ ಮುಖವು ಹೊಳೆಯುತ್ತದೆ.

 ಜೇನುತುಪ್ಪ:

1ಟೀ ಸ್ಪೂನ್ ಜೇನುತುಪ್ಪಕ್ಕೆ 1-2 ಹನಿ ನಿಂಬೆರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷದ ನಂತರ ತೊಳೆಯಿರಿ. ಮುಖದಲ್ಲಿ ಕಲೆಯಿದ್ದರೆ ನಿವಾರಣೆಯಾಗುತ್ತದೆ ಮತ್ತು ಚರ್ಮ ಮೃದುವಾಗುತ್ತದೆ.

ಕ್ಯಾಬೆಜ್(ಎಲೆಕೋಸು) ಮಾಸ್ಕ್:

ಎಲೆಕೋಸಿನ 2 ಎಲೆಯನ್ನು ನುಣ್ಣಗೆ ರುಬ್ಬಿ ರಸ ತೆಗೆದು ಇದಕ್ಕೆ ಅರ್ಧ ಟೀಸ್ಪೂನ್ ಯೀಸ್ಟ್ ಮತ್ತು 1ಟೀಸ್ಪೂನ್ ಜೇನುತುಪ್ಪ ಬೆರೆಸಿ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ 15 ನಿಮಿಷದ ನಂತರ ಒಂದು ಹತ್ತಿಯ ತುಂಡನ್ನು ರೋಸ್ ವಾಟರ್ ನಲ್ಲಿ ಅದ್ದಿ ಮುಖಕ್ಕೆ ಹಚ್ಚಿ “ಮಾಸ್ಕ್” ತೆಗೆಯಬೇಕು. ಇದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.

ನಿಂಬೆಹಣ್ಣಿನ ಮಾಸ್ಕ್:

ಒಂದು ಮೊಟ್ಟೆಯ ಬಿಳಿ ಮತ್ತು ಹಳದಿ ಲೋಳೆಯನ್ನು ಚೆನ್ನಾಗಿ ಕಲಸಿಕೊಂಡು ಇದಕ್ಕೆ ಅರ್ಧ ನಿಂಬೆಯ ರಸ ಮತ್ತು ಅರ್ಧ ಕಪ್ ಓಟ್-ಮೀಲ್ ಬೆರೆಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿ 15 ನಿಮಿಷದ ಮೇಲೆ ಮುಖ ತೊಳೆಯಿರಿ.ಇದರಿಂದ ಮುಖದ  ಬಣ್ಣ ಮತ್ತು ಕಾಂತಿ ಹೆಚ್ಚತ್ತದೆ.

ಸಿಲ್ವಿಯಾ ಕೊಡ್ದೆರೋ