ಕನ್ನಡ ಶಾಲೆಗಳಲ್ಲಿ ಸಿಗುವ ಅನುಭವ ಶ್ರೀಮಂತವಾದುದು: ಡಾ| ಅಶೋಕ್ ಕಾಮತ್

ಉದ್ಯಾವರ: ಈ ಶತಮಾನದ ಕನ್ನಡ ಶಾಲೆಗಳಲ್ಲಿ ಎಲ್ಲರೂ ಸಮಾನಾಗಿ ಕಲೆತು ಕಲಿಯುವ ವಾತಾವರಣವಿದೆ. ಇಲ್ಲಿ ಬಡವ, ಶ್ರೀಮಂತ, ಮೇಲು-ಕೀಳು ಎಂಬ ತಾರತಮ್ಯ ಇಲ್ಲದೆ ಎಲ್ಲರೂ ಕೂಡಾ ಸಮಾನತೆಯಿಂದ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಾಯವಾಗಿ ಉಳ್ಳವರಿಗೆ ಒಂದು ಶಾಲೆ, ಇಲ್ಲದವರಿಗೆ ಒಂದು ಶಾಲೆ ಎಂದು ವರ್ಗಿಕರಣಗೊಂಡಿದೆ. ಒಬ್ಬರೊಂದಿಗೆ ಒಬ್ಬರಿಗೆ ಸಂಪರ್ಕ ಇಲ್ಲದೆ ಅವರವರ ಅನುಭವಗಳಿಗೆ ಮಾತ್ರ ಸೀಮಿತರಾಗಿ ಮಕ್ಕಳು ದ್ವೀಪ ಆಗುತ್ತಿದ್ದಾರೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಈ ಶತಮಾನದ ಕನ್ನಡ ಶಾಲೆಗಳಲ್ಲಿ ಸಿಗುವ ಅನುಭವ ಶ್ರೀಮಂತವಾದುದು ಎಂದು ಉಡುಪಿ ಡಯಟ್ ಉಪ ಪ್ರಾಂಶುಪಾಲರು ಮತ್ತು ಉಡುಪಿ ಕ್ಷೇತ್ರದ ಪ್ರಭಾರ ಶಿಕ್ಷಣಾಧಿಕಾರಿಗಳೂ ಆದ ಡಾ| ಅಶೋಕ್ ಕಾಮತ್‍ರವರು ಹೇಳಿದರು.
ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ‘ವರ್ಷದ ಹರ್ಷ’ ನೂರರ್ವತ್ತೊಂದರ ಮೂರನೇ ದಿನ ಜರಗಿದ ನಿವೃತ್ತ ಶಿಕ್ಷಕರಿಗೆ ಸಂಮಾನ ಮತ್ತು ಮೂರು ವರ್ಷಗಳ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.

ಅವರು ಮುಂದುವರಿಯುತ್ತಾ, ಈಗ ನಿವೃತ್ತರಾಗುತ್ತಿರುವ ಶಿಕ್ಷಕರ ಅರ್ಪಣಾ ಮನೋಭಾವನ್ನು ನೋಡುವಾಗ ಮುಂದಿನ ಜನಾಂಗದಲ್ಲಿ ಇಂಥಹ ಶಿಕ್ಷಕರು ಇದ್ದರು ಎಂದರೆ ನಂಬಲು ಸಾಧ್ಯವಾಗಲಿಕ್ಕಿಲ್ಲ. ಯಾಕೆಂದರೆ ಕಾಲ ಎಲ್ಲವನ್ನು ಬದಲಾಯಿಸುತ್ತದೆ. ಹಳೆ ದಿನಗಳಲ್ಲಿ ಶಿಕ್ಷಕರದ್ದಾಗಲಿ ವಿದ್ಯಾರ್ಥಿಗಳದ್ದಾಗಲಿ ಬೀಳ್ಕೊಡುಗೆ ಎಂದರೆ ಎಲ್ಲರು ಅಳೋದು ಆದರೆ ಈಗ ಎಲ್ಲರೂ ಖುಷಿ ಪಡೋದು. ಭಾವನೆಗಳು ಒಂದೇ ಆದರೂ ಅದನ್ನು ಅಭಿವ್ಯಕ್ತಿಸುವ ರೀತಿ ಕಾಲ ಬದಲಾದಂತೆ ಬದಲಾಗಿದೆ.
ಇಂತಹ ಅನುದಾನಿತ ಶಾಲೆಗಳನ್ನು ಬೆಳೆಸುವುದೆಂದರೆ ಒಂದು ಯಜ್ಞದಂತೆ. ಈ ಶಾಲೆಯ ಅಭಿವೃದ್ಧಿ ಏಳು ಬೀಳುಗಳ ನಡುವೆ ಸಾಗಿದೆ. ಸರಕಾರದ ನೀತಿ ನಿಯಮಗಳೊಂದಿಗೆ ಏಗುತ್ತಾ. ಉಸಿರು ಬಿಡುತ್ತಾ ಸಾಗಿದೆ. ಇದು ನಿರಂತರವಾಗಲಿ ಎಂದು ಹಾರೈಸಿದರು.
ಶಾಲೆಯಿಂದ ನಿವೃತ್ತರಾದ ಮುಖ್ಯೋಪಾಧ್ಯಾಯರಾದ ಶ್ರೀ ಗಣಪತಿ ಕಾರಂತ್ ಸಹ ಶಿಕ್ಷಕಿಯರಾದ ಶ್ರೀಮತಿ ರತ್ನಾವತಿ, ಶ್ರೀಮತಿ ರಾಜೀವಿ ಅವರನ್ನು ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲೆಯ ಪರವಾಗಿ ಸಂಮಾನಿಸಿದರು. 2019, 2020, 2021 ಸಾಲಿನ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕ ಶ್ರೀ ಉದಯ ಗಾಂವ್ಕರ್‍ರವರು ರಚಿಸಿದ ‘ಮಕ್ಕಳ ಮಹಾತ್ಮಾ’ ಪುಸ್ತಕ ಕೊಟ್ಟು ಬೀಳ್ಕೊಟ್ಟರು.
ಶಾಲಾ ಹೆಮ್ಮೆಯ ಹಳೆ ವಿದ್ಯಾರ್ಥಿನಿ ಕಡೆಕಾರು ಕೆನರಾ ಬ್ಯಾಂಕ್‍ನ ಪ್ರಬಂಧಕರಾದ ಶ್ರೀಮತಿ ಶ್ವೇತಾ ಎಸ್. ಮಾತನಾಡಿ ನಾನು ಕಲಿತ ಶಾಲೆಯಲ್ಲೇ ನನ್ನ ಶಿಕ್ಷಕರೊಂದಿಗೆ ವೇದಿಕೆ ಹಂಚಿಕೊಳ್ಳುವ ಖುಷಿ ಇದೆಯಲ್ಲ ಅದು ವರ್ಣಿಸಲಾಗದ್ದು. ಅದರೊಂದಿಗೆ ನಾವು ಆ ಹಂತಕ್ಕೆ ಬೆಳೆದಿದ್ದೇವೆಯೆ ಎಂಬ ಪ್ರಶ್ನೆ ಕೂಡಾ ನಮ್ಮನ್ನು ಕಾಡುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ನಾನು, ಮತ್ತು ಹೆತ್ತವರು ತಮ್ಮ ಭವಿಷ್ಯದಲ್ಲಿ ಮುಂದುವರಿಯಲು ಏನಾದರೂ ತೊಡಕುಗಳು ಉಂಟಾಗಬಹುದು ಎಂಬ ಹಿಂಜರಿಕೆ ಬೇಡ. ನಾವು ಯಾವ ಮಾಧ್ಯಮದಲ್ಲಿ ಕಲಿತಿರೋದು ಎಂಬುದು ಮುಖ್ಯವಲ್ಲ, ಹೇಗೆ ಕಲಿತಿದ್ದೇವೆ ಎನ್ನುವುದು ಮುಖ್ಯ. ನನಗೆ ಎಂ.ಬಿ.ಎ.ಯಲ್ಲಿ ರ್ಯಾಂಕ್ ಬಂದಿತ್ತು. ಆ ವರ್ಷ ನಮ್ಮ ಕಾಲೇಜಿನ ನನ್ನ ಸಮೇತ ಮೂರು ಜನರಿಗೆ ರ್ಯಾಂಕ್ ಬಂದಿತ್ತು ನಾವು ಮೂರು ಜನ ಕೂಡಾ ಕನ್ನಡ ಮಾಧ್ಯಮದಲ್ಲಿ ಕಲಿತರವರು.
ಗುರು ಹಿರಿಯರನ್ನು ಗೌರವಿಸುತ್ತಾ ಶ್ರದ್ಧೆಯಿಂದ ನಾವು ಕಲಿಕೆಯಲ್ಲಿ ಮತ್ತು ಮುಂದಿನ ಬದುಕಲ್ಲಿ ತೊಡಗಿಕೊಂಡರೆ ಅದರ ಫಲ ನಮಗೆ ಸಿಕ್ಕೇ ಸಿಗುತ್ತದೆ. ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಡಾ| ತ್ರಿವೇಣಿ ವೇಣುಗೋಪಾಲ ಮಾತನಾಡುತ್ತಾ ಈ ದಿನ ಶಾಲೆಗೆ ಖುಷಿ ಮತ್ತು ದುಃಖ ಎರಡೂ ಆಗುತ್ತಿದೆ. ಸಮರ್ಥ ಶಿಕ್ಷಕರನ್ನು ಶಾಲೆ ಕಳೆದುಕೊಳ್ಳುತ್ತಿದೆ ಎಂದೂ ಮತ್ತು ಅವರ ಬದುಕು ಹಸನಾಗಲಿ ಎಂದೂ ನಾವು ಹಾರೈಸುವಂತಾಗಿದೆ.
ವಿದ್ಯಾರ್ಥಿಗಳ ಅಂಧಕಾರವನ್ನು ಹೋಗಲಾಡಿಸಿ ಜ್ಞಾನಾರ್ಜನೆ ಮಾಡಿಕೊಡುವವರು ಶಿಕ್ಷಕರು, ಮಕ್ಕಳಲ್ಲಿ ಧನಾತ್ಮಕ ಚಿಂತನೆಯನ್ನು ಬೆಳೆಸುವ ಮಾರ್ಗದರ್ಶಕರು ಅವರು. ವಿದ್ಯಾರ್ಥಿಗಳ ಮುಂದಿನ ಬದುಕಿನ ಅಡಿಪಾಯ ಹಾಕುವವರು ಶಿಕ್ಷಕರು. ಒಂದು ಶಾಲೆಯ ಅಭಿವೃದ್ಧಿಗೆ ಕೂಡಾ ಕಾರಣಕರ್ತರು. ಇಂದು ನಿವೃತ್ತಿಗೊಳ್ಳುತ್ತಿರುವ ಶಿಕ್ಷಕರ ಮುಂದಿನ ಬದುಕು ಹಸನಾಗಲಿ ಮತ್ತು ಬೀಳ್ಕೊಡಲ್ಪಡುವ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಸಂಮಾನಿತರಾದ ನಿವೃತ್ತ ಮುಖ್ಯೋಪಾದ್ಯಾಯ ಶ್ರೀ ಗಣಪತಿ ಕಾರಂತ್ ಸಹ ಶಿಕ್ಷಕರಾದ ಶ್ರೀಮತಿ ರತ್ನಾವತಿ, ಶ್ರೀಮತಿ ರಾಜೀವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬೀಳ್ಕೊಂಡ ವಿದ್ಯಾರ್ಥಿಗಳ ಪರವಾಗಿ ಮಾ| ಸಮರ್ಥ್ ಸಿ.ಎಸ್., ಕು| ಸಾನ್ವಿ ಶೆಟ್ಟಿ, ಮಾ| ಲಿಖಿತ್ ಕರ್ಕೇರ, ಕು| ವರ್ಷಿಣಿ ತಮ್ಮ ಅನಿಸಿಕೆಗಳನ್ನು ಮಂಡಿಸಿದರು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ಸುರೇಶ್ ಶೆಣೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ಕುಮಾರ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ನಿಕಟಪೂರ್ವ ಶಾಲಾ ಸಂಚಾಲಕರಾದ ಶ್ರೀ ಉದ್ಯಾವರ ನಾಗೇಶ್ ಕುಮಾರ್‍ರವರು ಸ್ವಾಗತಿಸಿದರು.
ಶಿಕ್ಷಕರಾದ ಶ್ರೀ ವಿಕ್ರಮ ಆಚಾರ್ಯ, ಶ್ರೀಮತಿ ಅನುರಾಧ ಶೆಟ್ಟಿ ಮತ್ತು ಸಂಚಾಲಕರಾದ ಶ್ರೀ ಸುರೇಶ್ ಶೆಣೈ, ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಶ್ರೀಮತಿ ಲಕ್ಷ್ಮೀ ಹೆತ್ತವರ ಸ್ಪರ್ಧೆಯ ಬಹುಮಾನ ಪಟ್ಟಿ ವಾಚಿಸಿದರು.
ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಹೇಮಲತಾ ವಂದಿಸಿದರು. ನಿವೃತ್ತ ಶಿಕ್ಷಕ, ಶಾಲಾಡಳಿತ ಮಂಡಳಿ ಸದಸ್ಯ ಶ್ರೀ ಕೃಷ್ಣ ಕುಮಾರ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಹಳೆ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಜರಗಿತು.