ಎರಡು ವರ್ಷದೊಳಗೆ ಕೊರೊನಾ ಪಿಡುಗು ಅಂತ್ಯ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ವಿಶ್ವಾಸ

ಜಿನಿವಾ: ಕೊರೊನಾ ಸೋಂಕಿಗೆ ಜಗತ್ತು ಲಸಿಕೆ ಕಂಡುಹಿಡಿಯಲು ಯಶಸ್ವಿಯಾದರೆ, ಈ ಮಹಾಮಾರಿ ಸೋಂಕನ್ನು‌ ಎರಡು ವರ್ಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಕೊನೆಯಾಗಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಪ್ರಸ್ತುತ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ವಿಶ್ವದೊಂದಿಗೆ ಹೆಚ್ಚು ಸಂಪರ್ಕ ಇರುವುದರಿಂದ ಹಾಗೂ ನಾವೆಲ್ಲರೂ ಪರಸ್ಪರ ಬೆಸೆದುಕೊಂಡಿರುವ ಕಾರಣದಿಂದ ಕೊರೊನಾ ಸೋಂಕು ಬಹುಬೇಗನೆ ವ್ಯಾಪಿಸುತ್ತಿದೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್‌ ಅನ್ನು ತಡೆಯುವ ತಂತ್ರಜ್ಞಾನ ಮತ್ತು ಜ್ಞಾನವೂ ನಮ್ಮಲ್ಲಿದೆ. ಹಾಗಾಗಿ ನಾವು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ವೈರಸ್‌ ಅನ್ನು ಅಂತ್ಯಗೊಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಜಗತ್ತಿನಲ್ಲಿ 2,28,68,238 ಮಂದಿ ಕೊರೊನಾ ಸೋಂಕಿತರಿದ್ದು, 7,97,871 ಮಂದಿ ಮೃತಪಟ್ಟಿದ್ದಾರೆ. 1,57,09,677 ಮಂದಿ ಗುಣಮುಖರಾಗಿದ್ದಾರೆ.