ಉಡುಪಿ: ಇಲ್ಲಿನ ಸರ್ವಿಸ್ ಬಸ್ಸ್ ನಿಲ್ದಾಣದ ಬಳಿಯ ಗಡಿಯಾರ ಗೋಪುರದ ಅಡಿಯಲ್ಲಿ ಇರುವ ಮಹಾತ್ಮಗಾಂಧಿಜೀ ಪ್ರತಿಮೆಗೆ ಕುಡುಕರ ಕಾಟ ಎದುರಾಗಿದೆ.
ಕುಡುಕರು ಕಂಠಪೂರ್ತಿ ಕುಡಿದು ಈ ಪವಿತ್ರವಾದ ಪ್ರತಿಮೆಯ ಕೆಳಗೆ ಮಲಗುವುದು, ಅಲ್ಲೇ ವಾಂತಿ ಮಾಡುವುದು, ಮೂತ್ರ ವಿಸರ್ಜಿಸುವ ಮೂಲಕ ಅಪವಿತ್ರಗೊಳಿಸುತ್ತಿದ್ದಾರೆ. ಅಲ್ಲಾಲ್ಲಿ ಗಲೀಜು ಮಾಡುವ ಮೂಲಕ ಈ ಪವಿತ್ರ ಸ್ಥಳದ ಅಂದವನ್ನು ಸಂಪೂರ್ಣ ಹಾಳು ಮಾಡುತ್ತಿದ್ದಾರೆ ಎಂದು ಉಡುಪಿ ನಾಗರಿಕ ಸಮಿತಿ ದೂರಿದೆ.
ಗಾಂಧೀ ಜಯಂತಿ, ಪುಣ್ಯತಿಥಿ ಸಂದರ್ಭದಲ್ಲಿ ಇಲ್ಲಿ ಸಂಘ ಸಂಸ್ಥೆಗಳು, ಆಡಳಿತ ವ್ಯವಸ್ಥೆಗಳು ಪುತ್ಥಳಿಗೆ ಹೂ ಮಾಲೆ ಸಮರ್ಪಿಸಿ ಸ್ಮರಿಸುವ ಪವಿತ್ರವಾದ ಸ್ಥಳ ಇದಾಗಿದೆ. ಆದರೆ ಇಂತಹ ಸ್ಥಳದಲ್ಲೇ ಕುಡುಕರು ಕುಡಿದು ಗಲೀಜು ಮಾಡುತ್ತಿರುವುದು ಗಾಂಧೀಜಿಯ ಮದ್ಯ ಮುಕ್ತ ಭಾರತದ ಕನಸಿಗೆ ಅಪಚಾರ. ಗಾಂಧಿಯ ಪ್ರತಿಮೆಯ ಕೆಳಗೆ ಅವರ ತತ್ವ ಸಿದ್ಧಾಂತಗಳಿಗೆ ಅಪಚಾರ ಎಸಗುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಸಮಿತಿ ವಿಷಾದ ವ್ಯಕ್ತಪಡಿಸಿದೆ.
ರಾಷ್ಟ್ರ ನಾಯಕರುಗಳ ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸುವಾಗ ಸೂಕ್ತ ರಕ್ಷಣೆ ನೀಡಬೇಕು. ಉಡುಪಿ ನಗರಾಡಳಿತವು ಗಾಂಧೀಜಿ ಪ್ರತಿಮೆಯ ಆವರಣದೊಳಗೆ ಕುಡುಕರು ನುಸುಳದಂತೆ ಭದ್ರತೆ ವ್ಯವಸ್ಥೆ ಒದಗಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
















