ಉಡುಪಿ: ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಗಳು ಜನಪರವಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಕಾರ್ಯಗಳನ್ನು ಕೈಗೊಂಡಾಗ ಜನರ ಮೆಚ್ಚುಗೆಗೆ ಸಹಜವಾಗಿಯೇ ಪಾತ್ರರಾಗುತ್ತಾರೆ. ಜಿಲ್ಲೆಯ ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತವು ಇಂತಹದ್ದೇ ಒಂದು ಕಾರ್ಯವನ್ನು ಕೈಗೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿನ ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಬೆಳೆದ ಅನಾಥ ಹುಡುಗಿ ಜಯಶ್ರೀ (ವಿಜಯಶ್ರೀ)ಎಂಬವರನ್ನು ಮಲ್ಲೇಶ ಡಿ.ಎಲ್. ಎಂಬವರೊಂದಿಗೆ ವಿವಾಹ ಮಾಡಿಕೊಡಲು ನಿಶ್ಚಯಿಸಲಾಗಿದ್ದು, ಅನಾಥ ಹೆಣ್ಣುಮಗಳಿಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಆಸರೆಯಾಗಿದ್ದಾರೆ. ಶುಕ್ರವಾರದಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ನಿಲಯ, ಉಡುಪಿ ವತಿಯಿಂದ ಉಡುಪಿ ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಸರಳ ಸಮಾರಂಭದಲ್ಲಿ ಜಯಶ್ರೀ ಅವರ ವಿವಾಹವು ಮಲ್ಲೇಶ್ ಅವರೊಂದಿಗೆ ನಡೆಯಿತು.
ಹುಡುಗಿಯ ಅಣ್ಣನ ಸ್ಥಾನದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಅವರು ವೈವಾಹಿಕ ಕಾರ್ಯಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪ ನಿರ್ದೇಶಕಿ ವೀಣಾ ಹಾಗೂ ಮಹಿಳಾ ನಿಲಯದ ಅಧಿಕಾರಿಗಳು ಉಪಸ್ಥಿತರಿದ್ದು, ವಧೂ ವರರನ್ನು ಹರಸಿದರು.