ರಾಷ್ಟ್ರದ ಅಭಿವೃದ್ದಿ ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ: ಪ್ರೊ. ನರೇಂದ್ರ.ಎಲ್.ನಾಯಕ್‌

ಮಂಗಳೂರು: ವಿದ್ಯಾರ್ಥಿಗಳು ಜೀವನದಲ್ಲಿ ನಿಖರವಾದ ಗುರಿಯನ್ನುಹೊಂದಿರಬೇಕು ಹಾಗೂ ಆ ಗುರಿ ಸಾಧಿಸುವಲ್ಲಿ ನಿರಂತರ ಪ್ರಯತ್ನ ಮಾಡಬೇಕು. ಸರಿಯಾದ ಯೋಜನೆ, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಹಾಗೂ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಶಿಖರವನ್ನು ತಲುಪಲು ಸಾಧ್ಯ. ವಿದ್ಯಾರ್ಥಿಗಳು ಸ್ವಯಂ ಶಿಸ್ತುಬದ್ಧರಾಗಿದರೆ ಮಾತ್ರ ಈ ರಾಷ್ಟ್ರ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ. ಆದ್ದರಿಂದ ರಾಷ್ಟ್ರದ ಅಭಿವೃದ್ಧಿ ಪ್ರತಿಯೊಬ್ಬ ವಿದ್ಯಾರ್ಥಿಯ ಕೈಯಲ್ಲಿದೆ. ಆ ಜವಾಬ್ದಾರಿಯನ್ನರಿತು ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಗಂಭೀರವಾಗಿ ಅಧ್ಯಯನ ಮಾಡಬೇಕು. ಕಾಲೇಜಿನಲ್ಲಿ ಕೆಲವೊಂದು ನಿಯಮ ನಿಬಂಧನೆಗಳು ಇದ್ದುಅದನ್ನುಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಮುರಿಯಬಾರದು ಎಂದು ಎಕ್ಸ್ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ.ಎಲ್.ನಾಯಕ್‌ ಹೇಳಿದರು.

ಭಾನುವಾರ ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ಆಯೋಜಿಸಿದ್ದ ಓರಿಯಂಟೇಶನ್-2022 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಎಕ್ಸ್ಪರ್ಟ್ ಶಿಕ್ಷಣ ಮತ್ತು ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾ ಪ್ರಭಾ ಎನ್.ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಗುವ ಪ್ರತಿಯೊಂದು ಸಣ್ಣ ಅವಕಾಶಗಳನ್ನು ಕೂಡ ಸದುಪಯೋಗಪಡಿಸಿಕೊಳ್ಳಬೇಕು. ಮನುಷ್ಯ ಆಶಾವಾದಿಯಾಗಿರಬೇಕು. ಆಸೆಯೇ ದುಃಖಕ್ಕೆ ಮೂಲ ಎಂದು ಕೈ ಕಟ್ಟಿಕೂಡುವುದಲ್ಲ. ಮನುಷ್ಯನಲ್ಲಿ ಆಸೆ ಎಂಬುದು ಇರಬೇಕು, ಇಲ್ಲವಾದಲ್ಲಿಆತ ಉದಾಸೀನನಾಗುತ್ತಾನೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಹಾಗೂ ವೃತ್ತಿಜೀವನದ ಮುಂದಿನ ಸವಾಲುಗಳನ್ನು ಎದುರಿಸುವಲ್ಲಿ ಮಾನಸಿಕವಾಗಿ ಸಿದ್ದರಾಗಬೇಕು. ಪೋಷಕರು ತಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಪೋಷಕರು ಮಕ್ಕಳಿಗೆ ಮಾದರಿಯಾಗಬೇಕು. ಅವರು ಯಾವುದೇ ರೀತಿಯಲ್ಲಿಅತಿಯಾದ ಒತ್ತಡ ಹೇರದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ಮೂವರೂ ಒಂದಾಗಿ ಕಾರ್ಯನಿರ್ವಹಿಸಿದರೆ ಮಾತ್ರ ವಿದ್ಯಾರ್ಥಿಯ ಸಂಪೂರ್ಣ ಯಶಸ್ಸು ಸಾಧ್ಯ ಎಂದರು.

ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್. ಎನ್. ನಾಯಕ್‌ ಶೈಕ್ಷಣಿಕ ಹಂತದಲ್ಲಿ ತಂತ್ರಜ್ಞಾನದ ಸರಿಯಾದ ಬಳಕೆ ಮಾಡುವುದರ ಕುರಿತು ಮಾಹಿತಿ ನೀಡಿದರು.

ಎ.ಐ.ಸಿ.ಇ.ವಿಭಾಗದ ಸಂಯೋಜಕ ಪ್ರೊ.ಶ್ಯಾಮ್ ಪ್ರಸಾದ್‌ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ, ಕಾಲೇಜಿನ ವಿವಿಧಕೋರ್ಸ್ ಗಳು ಮತ್ತು ಕೋರ್ಸ್ ಗಳಿಗಿರುವ ಅವಕಾಶ ಮತ್ತು ಉದ್ಯೋಗ ಸಾಧ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ವಳಚ್ಚಿಲ್‌ನ ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಸುಬ್ರಹ್ಮಣ್ಯ ಉಡುಪ ಮಾತನಾಡಿ, ಪದವಿ ಪೂರ್ವ ಹಂತವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಆರಂಭವಾಗಿದ್ದು, ವಿದ್ಯಾರ್ಥಿಗಳ ನಿರಂತರವಾದ ಪರಿಶ್ರಮಕ್ಕೆ ತಕ್ಕ ಫಲ ಖಂಡಿತ ಸಿಕ್ಕೇ ಸಿಗುತ್ತದೆ ಎಂದರು. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿನಿ ಸಿಯಾ ದಯಾನಂದ ಚೌಟ ಹಾಗೂ ಅವರ ಪೋಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ರಾಧಿಕಾ ಭಟ್ ಹಾಗೂ ಇತರ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಹಿಂದಿ ವಿಭಾಗದ ಉಪನ್ಯಾಸಕಿ ಶ್ರೀಮತಿ ಅಶ್ವಿನಿ ಪೈ ನಿರೂಪಿಸಿ, ವಂದಿಸಿದರು.