ಉಡುಪಿ: ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಆರೋಪಿಗಳಿಗೆ ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಪ್ರಕರಣ:
2015 ರ ಡಿಸೆಂಬರ್ 26 ರಂದು ರಾತ್ರಿ 2.30 ರ ಸುಮಾರಿಗೆ ಅಬ್ದುಲ್ ಖಾದರ್ ಅಲಿಯಾಸ್ ಎ.ಬಿ.ಅಬೂಬಕ್ಕರ್ ಹಾಗೂ ಅಜೀಜ್ ಅಲಿಯಾಸ್ ಬೊಂಡಾ ಅಜೀಜ್ ಎನ್ನುವವರು ಎಲ್ಲೂರು ಗ್ರಾಮದ ಅದಮಾರು ಎಂಬಲ್ಲಿನ ಪಿ. ಜನಾರ್ಧನ ರಾವ್ ಎನ್ನುವವರ ಮನೆಯ ಬಾಗಿಲಿನ ಚಿಲಕವನ್ನು ತೆಗೆದು, ಅಕ್ರಮವಾಗಿ ಮನೆಯ ಒಳಗೆ ಪ್ರವೇಶಿಸಿ, ಬೆಡ್ ರೂಂನ ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿರುವ ಹಿನ್ನೆಲೆ, ಪಡುಬಿದ್ರೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ದೋಷಾರೋಪಣಾ
ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆ, ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್ ಯೋಗೀಶ್ ಅವರು ಇಬ್ಬರೂ ಆರೋಪಿಗಳಿಗೆ 2 ತಿಂಗಳುಗಳ ಕಾಲ ಜೈಲು ಶಿಕ್ಷೆ ಹಾಗೂ ಒಟ್ಟು 40,000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬದರೀನಾಥ್ ನಾಯರಿ ವಾದ ಮಂಡಿಸಿರುತ್ತಾರೆ.
ಹಲ್ಲೆ ನಡೆಸಿದ ಆರೋಪಿಗೆ ಸಜೆ
ಹಲ್ಲೆ ನಡೆಸಿದ ಪ್ರಕರಣದ ಆರೋಪಿಗೆ ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಪ್ರಕರಣ:
2012 ರ ಜುಲೈ 8 ರಂದು ಸಂಜೆ 4.45 ರ ಸುಮಾರಿಗೆ ಮಹಾದೇವಪ್ಪ ಎಂಬಾತನು ಉಡುಪಿ ತಾಲೂಕು ನಂದಿಕೂರು ಗ್ರಾಮದ ಅಡ್ವೆ ಅಣ್ಣಾಜಿಗೋಳಿ ಎಂಬಲ್ಲಿರುವ ಅಡ್ವೆಯ ವಿಜಯ ರೈ ಅವರ ಬಾಬ್ತು ಹಂಚಿನ ಕಟ್ಟಡದಲ್ಲಿರುವ ಒಂದನೇ ಅಂತಸ್ತಿನ ಕೋಣೆಗೆ ಅಕ್ರಮ ಪ್ರವೇಶ ಮಾಡಿ, ಕೋಣೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಚೆನ್ನರವರನ್ನು ಉದ್ದೇಶಿಸಿ, ಕೋಣೆಯಿಂದ ಹೊರಹೋಗುವಂತೆ ಹೇಳಿ, ಅವರ ಹೊಟ್ಟೆ ಹಾಗೂ ಬಲಕೈಬೆರಳಿಗೆ ಕತ್ತಿಯಿಂದ ಹೊಡೆದು ತೀವ್ರ ಸ್ವರೂಪದ ಗಾಯ ಉಂಟುಮಾಡಿರುವ ಹಿನ್ನೆಲೆ, ಪಡುಬಿದ್ರೆ ಠಾಣೆಯ
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು, ಆರೋಪ ಸಾಬೀತಾದ ಹಿನ್ನೆಲೆ, ನಗರದ ಹೆಚ್ಚುವರಿ ಸಿ.ಜೆ ಮತ್ತು ಎ.ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್ ಯೋಗೀಶ್ ಅವರು ಆರೋಪಗೆ ಮಹಾದೇವಪ್ಪನಿಗೆ 6 ತಿಂಗಳುಗಳ ಜೈಲು ಶಿಕ್ಷೆ ಹಾಗೂ 10000 ರೂ. ದಂಡ ವಿಧಿಸಿ, ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬದರೀನಾಥ್ ನಾಯರಿ ವಾದ ಮಂಡಿಸಿರುತ್ತಾರೆ.