ಕಾಂಗ್ರೆಸ್ ಗ್ಯಾರಂಟಿ ಮುಂದಿನ ಸಂಪುಟ ಸಭೆಯ ನಂತರ ಜಾರಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತಿ ಸಿದ್ದರಾಮಯ್ಯನವರ ಪ್ರಮಾಣ ವಚನ ಸ್ವೀಕಾರ ಸಮಯದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾವು ನಿಮಗೆ 5 ಭರವಸೆಗಳನ್ನು ನೀಡಿದ್ದೇವೆ. ನಾವು ಸುಳ್ಳು ಭರವಸೆ ನೀಡುವುದಿಲ್ಲ ಎಂದು ಹೇಳಿದ್ದೆ. ನಾವು ಹೇಳಿದ್ದನ್ನು ಮಾಡುತ್ತೇವೆ. 1-2 ಗಂಟೆಗಳಲ್ಲಿ ಕರ್ನಾಟಕ ಸರ್ಕಾರದ ಮೊದಲ ಸಂಪುಟ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಈ 5 ಭರವಸೆಗಳು ಕಾನೂನಾಗಲಿವೆ ಎಂದಿದ್ದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧದಲ್ಲಿ ಮೊದಲನೆ ಸಂಪುಟ ಸಭೆ ನಡೆದಿದ್ದು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳ ಭರವಸೆ ನೀಡಲಾಗಿದ್ದು, ಮೊದಲ ಸಚಿವ ಸಂಪುಟ ಸಭೆಯ ನಂತರ ಆ ಐದು ಭರವಸೆಗಳ ಅನುಷ್ಠಾನಕ್ಕೆ ಆದೇಶ ನೀಡಲಾಗಿದೆ. ಒಂದು ವಾರದೊಳಗೆ ಕರೆಯಲಾಗುವ ಮುಂದಿನ ಸಂಪುಟ ಸಭೆಯ ನಂತರ ಎಲ್ಲವೂ ಜಾರಿಯಾಗಲಿದೆ ಎಂದು ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರ ನಿರುಪಯುಕ್ತವಾಗಿತ್ತು, ನಮಗೆ ತೆರಿಗೆಯ ಪಾಲು ಸರಿಯಾಗಿ ಸಿಗಲಿಲ್ಲ. ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರ ನಮಗೆ 5,495 ಕೋಟಿ ರೂ. ನೀಡಬೇಕಾಗಿದೆ. ಹಿಂದಿನ ಸರ್ಕಾರಕ್ಕೆ ಅದು ಸಿಗಲಿಲ್ಲ. ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿದ್ದಾರೆ ಮತ್ತು ಕರ್ನಾಟಕವು ನಷ್ಟ ಅನುಭವಿಸಲು ಅವರು ಮತ್ತು ಪ್ರಧಾನಿ ಕಾರಣ ಎಂದು ಅವರು ಹೇಳಿದರು.

ಕರ್ನಾಟಕ ವಿಧಾನಸಭೆಯ ಅಧಿವೇಶನ ಮುಂದಿನ ವಾರ ಸೋಮವಾರ, ಮಂಗಳವಾರ ಮತ್ತು ಬುಧವಾರ ನಡೆಯಲಿದೆ. ಮುಂದಿನ ವಾರ ಕರೆದಿರುವ ಕರ್ನಾಟಕ ವಿಧಾನಸಭೆಯ ಅಧಿವೇಶನಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ಅವರು ಹಂಗಾಮಿ ಸ್ಪೀಕರ್ ಆಗಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.