ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು:ಇಂದಿನಿಂದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು. ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷ ಗೇಲಿ ಮಾಡಿಕೊಂಡೇ ಇರಲಿ ನಾವು ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಶಕ್ತಿ ಯೋಜನೆ ಜಾರಿ ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ವಿರೋಧ ಪಕ್ಷದವರಿಗೆ ನಡುಕ ಹುಟ್ಟಿದೆ. ಅದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಗೇಲಿ ಮಾಡಿಕೊಂಡೇ ಇರಲಿ. ನಾವು ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಡವರ, ಮಧ್ಯಮ ವರ್ಗದವರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆ ವೇಗ ಪಡೆದುಕೊಳ್ಳುತ್ತದೆ. ಶ್ರೀಮಂತರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆಗೆ ಅಷ್ಟು ಲಾಭ ಆಗುವುದಿಲ್ಲ. ಆದ್ದರಿಂದ ನಾವು ಬಡವರು, ಮಧ್ಯಮ ವರ್ಗದವರ ಜೇಬಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಹಣ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬರೀ ಶ್ರೀಮಂತರ ಹಿತ ಕಾಯುವ ಬಿಜೆಪಿಯವರಿಗೆ ನಮ್ಮ ಕಾಳಜಿ ಸಹಿಸಲು ಆಗುತ್ತಿಲ್ಲ. ನಮ್ಮ ಗುರಿ ಜನರ ಸಂಕಷ್ಟ ತಗ್ಗಿಸುವುದು. ಪ್ರಮಾಣವಚನ ಸ್ವೀಕರಿಸಿ ಕೇವಲ 20 ದಿನಗಳಲ್ಲಿ ಮೊದಲ ಗ್ಯಾರಂಟಿ ಜಾರಿಯಾಗಿ ನಾಡಿನ ಸಮಸ್ತ ಮಹಿಳೆಯರು ಇದರ ಅನುಕೂಲ ಪಡೆಯಲು ಶುರು ಮಾಡಿದ್ದಾರೆ. ಇಡಿ ರಾಜ್ಯದಲ್ಲಿ ಏಕ ಕಾಲಕ್ಕೆ ಶಕ್ತಿ ಯೋಜನೆ ಜಾರಿ ಆಗಿದೆ. ಈ 20 ದಿನಗಳಲ್ಲಿ ಬಿಜೆಪಿ ಪರಿವಾರ ಸುಳ್ಳಿನ ಮಹಾಪೂರವನ್ನೇ ಹರಿಸಿತು. ನಾವು ವಿಚಲಿತರಾಗಲಿಲ್ಲ. ನಮ್ಮ ಗುರಿ “ನುಡಿದಂತೆ ನಡೆಯುವುದಾಗಿತ್ತು”. ಅದನ್ನು ಮಾಡಿದ್ದೇವೆ.
ಮಹಿಳೆಯರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಈ ಯೋಜನೆಗೆ “ಶಕ್ತಿ” ಎಂದು ಹೆಸರಿಡಲಾಗಿದೆ. ದೇಶದ ಅರ್ಧದಷ್ಟಿರುವ ಮಹಿಳೆಯರು ಅಭಿವೃದ್ಧಿಯಲ್ಲಿ ಪಾಲುದಾರರಾಗದೆ ದೇಶದ ಪ್ರಗತಿ ಸಾಧ್ಯವಿಲ್ಲ. ಭಾರತದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಕಡಿಮೆ ಆಗಿದೆ. ಈ ಪ್ರಮಾಣ ಹೆಚ್ಚಾಗಬೇಕು ಎಂದರು.
ಬಡವರು, ಮಧ್ಯಮ ವರ್ಗದವರಿಗೆ ಸರ್ಕಾರ ಅನುಕೂಲ ಮಾಡಿದರೆ ಬಿಜೆಪಿಯವರು ಸುಳ್ಳುಗಳ ಮೂಲಕ ಗುಲ್ಲೆಬ್ಬಿಸಿ ಗೊಂದಲ ಸೃಷ್ಟಿಸುತ್ತಾರೆ. ಮಾಧ್ಯಮದವರು ಬಿಜೆಪಿಯವರ ಜತೆ ಸೇರಿ ಗೊಂದಲ ಹೆಚ್ಚಿಸಬಾರದು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಶಿಫಾರಸ್ಸಿನಂತೆ ಮೊನ್ನೆ ವಿದ್ಯುತ್ ದರ ಹೆಚ್ಚಳವಾಗಿದೆ. ಆದರೆ, ನಾವೇ ವಿದ್ಯುತ್ ದರ ಹೆಚ್ಚಿಸಿದೆವು ಎನ್ನುವ ಪರಮ ಸುಳ್ಳನ್ನು ಬಿಜೆಪಿ ಪರಿವಾರ ಹರಡಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಟೀಕಿಸಿದರು.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ಐದು ಗ್ಯಾರಂಟಿ ಮೂಲಕ ನಾವು ವಾಗ್ದಾನ ಕೊಟ್ಟಿದ್ದೆವು. ಹಿಂದೆ ನಮ್ಮ ಸರ್ಕಾರ ಇದ್ದಾಗ ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಬಸವಾದಿ ಶರಣರು ನುಡಿದಂತೆ ದಾರ್ಶನಿಕರು ನುಡಿದಂತೆ ಕೊಟ್ಟ ಮಾತನ್ನು ಈಡೇರಿಸುವುದು ನಮ್ಮ ಉದ್ದೇಶ.
ಐದು ಗ್ಯಾರಂಟಿಗಳನ್ನು ನಾವು ಕೊಟ್ಟಿದ್ದೇವೆ. ಆ ಗ್ಯಾರಂಟಿಗಳನ್ನು ರುಜು ಮಾಡಿ ಮನೆ ಮನೆಗೆ ಹಂಚಿದ್ದೆವು. ಪ್ರತಿಪಕ್ಷಗಳು ಅದನ್ನು ಗೇಲಿ ಮಾಡಿದರು. ಜಾರಿ ಮಾಡಿದರೆ ರಾಜ್ಯ ದಿವಾಳಿ ಆಗಲಿದೆ ಎಂದು ತಮಾಷೆ ಮಾಡಿದರು. ಅದರಿಂದ ನಾವು ವಿಚಲಿತರಾಗಿಲ್ಲ ಎಂದರು.
ಪ್ರತಿಪಕ್ಷಗಳು ಗೊಂದಲಕ್ಕೆ ಯತ್ನಿಸುತ್ತಿದ್ದಾರೆ. ಯಾವುದೇ ಗೊಂದಲ ಇಲ್ಲ. ವಿದ್ಯುತ್ ದರ ಏರಿಸಿದರು ಎಂದು ಗುಲ್ಲು ಹಬ್ಬಿಸುವುದು. ವಿದ್ಯುತ್ ದರ ಹಿಂದೆನೇ ಏರಿಕೆಯಾಗಿದೆ. ನಾವು ಬರುವ ಮೊದಲೇ ಕೆಇಆರ್ ಸಿ ವಿದ್ಯುತ್ ಪರಿಷ್ಕರಣೆ ಮಾಡಿದೆ. ಪ್ರತಿ ವರ್ಷ ಪರಿಷ್ಕರಣೆ ಮಾಡಲು ಇರುವ ಸ್ವಾಯತ್ತ ಆಯೋಗ ಅದು ಎಂದು ತಿಳಿಸಿದರು.
ಮಹಿಳಾ ಪ್ರಯಾಣಿಕರ ಸಂಖ್ಯೆ 41.85 ಲಕ್ಷ ಇದೆ. ಅವರು ಎಲ್ಲಾ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿ ಪ್ರಯಾಣ ಬೆಳೆಸಬಹುದು. ಯಾವುದೇ ಜಾತಿ, ಧರ್ಮ, ಲಿಂಗಬೇಧ ಇಲ್ಲದೆ ಈ ಯೋಜನೆ ಜಾರಿಯಾಗಿದೆ. ಇತರೆ ರಾಜ್ಯದ ಗಡಿ ದಾಟಿ ಸಾರಿಗೆ ಬಸ್ ಹೋಗಬೇಕಾದರೆ ಅದಕ್ಕೆ ಕಾಸು ಕೊಡಬೇಕಾಗಿಲ್ಲ.
ಗಡಿಯಾಚೆಗೆ 20 ಕಿ.ಮೀ. ವರೆಗಿನ ಪ್ರಯಾಣಕ್ಕೆ ಮಾತ್ರ ಇದು ಅನ್ವಯವಾಗಲಿದೆ. ಮಹಿಳೆಯರಿಗೆ ಶಕ್ತಿ ತುಂಬಬೇಕು ಎಂಬ ಕಾರಣಕ್ಕೆ ಶಕ್ತಿ ಹೆಸರು ಇಟ್ಟಿದ್ದೇವೆ. ಮನೆಯ ಯಜಮಾನಿಯರು ಗಂಡದಿರನ್ನು, ಮಕ್ಕಳನ್ನು ನೋಡುತ್ತಾರೆ. ಹೆಣ್ಣು ಸಮಾಜದ ಕಣ್ಣು ಎನ್ನಲಾಗುತ್ತದೆ ಎಂದು ತಿಳಿಸಿದರು.