ಕೇಂದ್ರ, ರಾಜ್ಯ ಸರಕಾರದ ಜನಪರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು: ಕುಯಿಲಾಡಿ

ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಕಾರ್ಯಕರ್ತರು ಪಣತೊಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕರೆ ನೀಡಿದರು.

ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಸಮುದಾಯಗಳನ್ನು ಒಂದೇ ಸೂರಿನಡಿ ಒಗ್ಗೂಡಿಸಿ ಸಂಘಟಿಸುವುದು ಸುಲಭದ ಮಾತಲ್ಲ. ಆದರೆ ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ಇದು ಸುಲಭ ಸಾಧ್ಯ. ಈ ಹಿಂದೆ ಎಸ್.ಸಿ. ಮತ್ತು ಎಸ್.ಟಿ. ಸಮುದಾಯವನ್ನು ಕಾಂಗ್ರೆಸ್ ಕೇವಲ ತನ್ನ ಮತ ಬ್ಯಾಂಕ್ ಆಗಿ ಬಳಸಿಕೊಂಡಿತ್ತು. ಆದರೆ ಇಂದಿನ ಪೀಳಿಗೆ ಸತ್ಯವನ್ನು ಅರಿತುಕೊಂಡಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ತತ್ವಾದರ್ಶಗಳು, ಸಮರ್ಥ ನಾಯಕತ್ವ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಯೋಜನೆಗಳತ್ತ ಜನತೆ ಆಕರ್ಷಿತರಾಗಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಪಕ್ಷದ ಸಂಘಟನಾತ್ಮಕ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್.ಟಿ. ಮೋರ್ಚಾದ ನೂತನ ಜಿಲ್ಲಾ ಅಧ್ಯಕ್ಷರಾಗಿ ನಿತ್ಯಾನಂದ ನಾಯ್ಕ್ ಚಾಂತಾರು ಅಧಿಕಾರ ಸ್ವೀಕರಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಮನೋಹರ್ ಎಸ್. ಕಲ್ಮಾಡಿ, ಜಿಲ್ಲಾ ಎಸ್.ಟಿ. ಮೋರ್ಚಾ ಉಸ್ತುವಾರಿ ನಳಿನಿ ಪ್ರದೀಪ್ ರಾವ್, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯ್ಕ್ ಮತ್ತು ನೂತನ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಎಸ್.ಟಿ. ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೆ. ಪುತ್ರನ್ ಹೆಬ್ರಿ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಗೌಡ ಈದು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ ವಿ. ಕುಂದಾಪುರ ವಂದಿಸಿದರು.