ಫಾಜಿಲ್ ಹತ್ಯೆಗೆ ಬಳಸಿದ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆ

ಪಡುಬಿದ್ರೆ: ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಇಯಾನ್ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ.

ಭಾನುವಾರ ಬೆಳಿಗ್ಗೆ ಸ್ಥಳೀಯರು ಉಡುಪಿ ಜಿಲ್ಲಾ ಪೋಲಿಸರಿಗೆ ಅಪರಿಚಿತ ಕಾರು ಇರುವ ಬಗ್ಗೆ ಮಾಹಿತಿ ನೀಡಿದ್ದು, ಪೋಲಿಸರು ಸ್ಥಳಕ್ಕೆ ತೆರಳಿ ಕಾರನ್ನು ಗಮನಿಸಿದಾಗ ಫಾಜಿಲ್ ಹತ್ಯೆಗೆ ಬಳಸಿದ ಕಾರು ಎಂದು ತಿಳಿದು ಬಂದಿದೆ.

ಆರೋಪಿಗಳು ಕಾರನ್ನು ಸುರತ್ಕಲ್ ನಿಂದ ಪಡುಬಿದ್ರೆಯ ಇನ್ನಾಕ್ಕೆ ಚಲಾಯಿಸಿಕೊಂಡು ಬಂದು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈ ಕುರಿತು ಮಂಗಳೂರು ಪೊಲೀಸ್ ಕಮಿಶನರ್ ಶಶಿಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಕಾರ್ ಮಾಲೀಕ ಅಜಿತ್ ಡಿಸೋಜಾ ಇನ್ನೊಬ್ಬರಿಗೆ ಕಾರ್ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಮಾಧ್ಯಮ ವರದಿ ಮಾಡಿದೆ. ಘಟನೆಯ ಸಂಬಂಧ ಹಂತ ಹಂತವಾಗಿ 14, 21, 16 ಜನರನ್ನು ಈ ರೀತಿ ಒಟ್ಟು 51 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಎಂದು ಶಶಿಕುಮಾರ್ ತಿಳಿಸಿದ್ದಾರೆ ಎಂದು ಮಾಧ್ಯಮ ತಿಳಿಸಿದೆ.