ಉಡುಪಿ: ಶುಕ್ರವಾರದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ನಲ್ಲಿ ನಮ್ಮ ಕರಾವಳಿ ಜಿಲ್ಲೆಗಳನ್ನು ಮತ್ತೆ ಕಡೆಗಣಿಸಿದ್ದಾರೆ. ತುಳು ಭಾಷೆಯನ್ನು ಸರ್ಕಾರದ ಮಂತ್ರಿ ಸಭೆಯಲ್ಲಿಯೇ ಅವಮಾನ ಮಾಡಿದಾರೆ. ಅದೇ ರೀತಿ ಅನೇಕ ಸಮುದಾಯಗಳ ಬೇಡಿಕೆಗೆ ಬಜೆಟ್ ನಲ್ಲಿ ಕಿಂಚಿತ್ತೂ ಸ್ಪಂದಿಸುವ ಕೆಲಸ ಮಾಡಿಲ್ಲ. ಅನೇಕ ಸಮುದಾಯಗಳ ಅಭಿವೃದ್ಧಿ ನಿಗಮ ಮಂಡಳಿಗೆ ಅನುದಾನವೂ ಘೋಷಣೆ ಮಾಡಿಲ್ಲ. ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಊಟಕ್ಕೆ ಇಲ್ಲದ ಉಪ್ಪಿನಕಾಯಿಯಂತಾಗಿದೆ. ಇದರಿಂದ ಯಾರಿಗೂ ಪ್ರಯೋಜನ ಇಲ್ಲ. ಕಳೆದ ಬಾರಿ ಬಜೆಟ್ ನಲ್ಲಿ ಘೋಷಿಸಿದ ಭರವಸೆಗಳು ಈವರೆಗೂ ಪೂರೈಸಿಲ್ಲ. ಬಜೆಟ್ ಗಾತ್ರ ಮಾತ್ರ ದೊಡ್ಡದಾಗಿದೆ ಆದರೆ ಅಂತಿಮವಾಗಿ ಅದರ ಫಲಿತಾಂಶ ಶೂನ್ಯ ಎಂದು ಕೆ. ಕೃಷ್ಣಮೂರ್ತಿ ಆಚಾರ್ಯ ಹೇಳಿದ್ದಾರೆ.
ಜನರ ಕಣ್ಣಿಗೆ ಮಣ್ಣೆರಚುವ ತಂತ್ರವನ್ನು ಬಜೆಟ್ ನಲ್ಲಿ ಮಾಡಲಾಗಿದ್ದು, ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಬಿಜೆಪಿಯ ಅನೇಕ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರೇ ಬೊಮ್ಮಾಯಿ ಅವರ ಈ ಬಜೆಟ್ ಬಗ್ಗೆ ಅಪಸ್ವರ ಎತ್ತಿ ಲೇವಡಿ ಮಾಡಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸಲು ವಿಫಲವಾಗಿರುವ ಬಿಜೆಪಿ ನಿರುದ್ಯೋಗಿ ಪದವೀಧರರಿಗೆ 2000 ವೇತನವನ್ನು ಘೋಷಿಸಿ ತನ್ನ ವೈಫಲ್ಯಗಳನ್ನು ಮರೆಮಾಚಲು ಯತ್ನಿಸಿದೆ. ನೀರಾವರಿ ಮತ್ತು ರಸ್ತೆಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಜನರ ಒಲೈಕೆಗಾಗಿ ಬಜೆಟ್ ಘೋಷಿಸಿರುವ ಬಸವರಾಜ ಬೊಮ್ಮಾಯಿಯವರು ಕಳೆದ ವರ್ಷ ಮಂಡಿಸಿರುವ ಬಜೆಟಿನ ಅರ್ಧದಷ್ಟು ಖರ್ಚು ಮಾಡಲು ವಿಫಲಗೊಂಡಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಯಾವುದೇ ಘೋಷಣೆಗಳನ್ನು ಮಾಡದೇ ಇರುವ ಬಿಜೆಪಿ ಸರ್ಕಾರ ಜನಸಾಮಾನ್ಯರ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಕಡಿಮೆ ಮಾಡಿಲ್ಲ. ಜನರ ಮೇಲಿನ ಹಣದುಬ್ಬರದ ಹೊರೆ ಕಡಿಮೆ ಮಾಡುವುದರಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಬಜೆಟ್ ನಲ್ಲಿ ಘೋಷಿಸಿದ ಯಾವುದೇ ಯೋಜನೆಗಳು ಅನುಷ್ಠಾನಕ್ಕೆ ಬರುವುದಿಲ್ಲ. ಬಿಜೆಪಿಯು ಕರ್ನಾಟಕದ 7 ಕೋಟಿ ಜನರ ಕಿವಿ ಮೇಲೆ ಹೂವು ಇಟ್ಟಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತು ಬಿಸಾಕಿ ಸೋಲಿಸುವ ಮೂಲಕ ಬಿಜೆಪಿ ಕಿವಿಗೆ ಜನರೇ ಹೂವು ಇಟ್ಟು ಮನೆಗೆ ಕಳಿಸುತ್ತಾರೆ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರ ದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಪ್ರಕಟಣೆಯಲ್ಲಿ ಹೇಳಿದ್ದಾರೆ.