ಉಡುಪಿ: ಸೋಮವಾರ ನಿಧನರಾದ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ 9.30ಕ್ಕೆ ಸುಮಾರಿಗೆ ಮಂಗಳೂರಿನಿಂದ ಉಡುಪಿಗೆ ತರಲಾಗಿದೆ.
ಉಡುಪಿ ಶೋಕ ಮಾತಾ ಇಗರ್ಜಿಗೆ ಆಗಮಿಸಿದ ಪಾರ್ಥಿವ ಶರೀರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಂತಿಮ ನಮನ ಸಲ್ಲಿಸಿದರು.
ಬಳಿಕ ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಬಲಿಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಮಾಜಿ ಶಾಸಕ ಜೆ.ಆರ್.ಲೋಬೊ, ಐವನ್ ಡಿಸೊಜ, ಎಂ.ಎ. ಗಫೂರ್, ಆಸ್ಕರ್ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಮೊದಲಾದವರು ಹಾಜರಿದ್ದರು.
ಚರ್ಚ್ ನಲ್ಲಿ ಧಾರ್ಮಿಕ ವಿಧಿವಿಧಾನ ಮುಗಿದ ಬಳಿಕ ಪಾರ್ಥಿವ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಉಡುಪಿ ಕಾಂಗ್ರೆಸ್ ಭವನದಲ್ಲಿ ಇಡಲಾಗುತ್ತದೆ.