ಹೊಸ ಆಕರ್ಷಣೆಯಾಗಿ ಪಣಂಬೂರು ಕಡಲ ಕಿನಾರೆಗೆ ಫ್ಲೋಟಿಂಗ್ ಬ್ರಿಡ್ಜ್, ಬೋಟಿಂಗ್, ಪ್ಯಾರಚೂಟ್, ಸ್ಪೀಡ್ ಬೋಟ್ಗಳು ಬಂದಿದೆ. ಪ್ರವಾಸಿಗರು ವರ್ಷಾಂತ್ಯಕ್ಕೆ ಬೀಚ್ಗೆ ಆಗಮಿಸಿ ಈ ಎಲ್ಲದರ ಮೂಲಕ ಕಡಲ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾರೆ. ಅಲ್ಲದೇ ಒಂಟೆಗಳ, ಕುದುರೆಗಳ ಬೆನ್ನೇರಿ ಕಡಲ ತೀರದುದ್ದಕ್ಕೂ ಸವಾರಿ ಮಾಡುವ, ಮಕ್ಕಳು ಗಾಳಿಪಟಗಳನ್ನು ಹಾರಿಸುತ್ತಿರುವ, ಜಾರುಬಂಡಿಯಲ್ಲಿ ಜಾರುತ್ತಾ, ಮೇಲಕ್ಕೆ ಕೆಳಗೆ ಹಗ್ಗದಲ್ಲಿ ಜೀಕಾಡುತ್ತಾ, ಸ್ಪೋಟ್ಸ್ ಕಾರು ಸವಾರಿ ಮಾಡುತ್ತಾ ಮಜಾ ಮಾಡುತ್ತಿರುವ ದೃಶ್ಯ ಕಡಲ ಕಿನಾರೆಯಲ್ಲಿ ಕಂಡು ಬಂದಿದೆ. ಪ್ರವಾಸಿಗರು ಸೂರ್ಯಾಸ್ತದ ಸೌಂದರ್ಯವನ್ನು ಆಸ್ವಾದಿಸುತ್ತಾ ಸೆಲ್ಫಿಗಳಲ್ಲಿ ಸೆರೆಹಿಡಿಯುತ್ತಾ ಮೈಮರೆಯುತ್ತಿದ್ದರು.
ಮಂಗಳೂರು, ಡಿಸೆಂಬರ್ 28: ಇನ್ನೇನು ಮೂರು ದಿನಗಳು ಕಳೆದರೆ ನಾವೆಲ್ಲಾ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಆದರೆ ಈ ವರ್ಷಾಂತ್ಯಕ್ಕೆ ನಗರದ ಪಣಂಬೂರು ಕಡಲ ಕಿನಾರೆ ಪ್ರವಾಸಿಗರಿಂದ ಗಿಜಿಗುಡುತ್ತಿದೆ. ಎಲ್ಲಿ ನೋಡಿದರೋ ಜನವೋ ಜನ. ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಸಮುದ್ರ ವಿಹಾರಿಗಳು ಅಲೆಗಳಲ್ಲಿ ಆಟವಾಡುತ್ತಿರುವ, ನೀರಿನಲ್ಲಿ ಮುಳುಗೇಳುತ್ತಿರುವ, ಸಂತಸದಿಂದ ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಒಟ್ಟಿನಲ್ಲಿ ವರ್ಷಾಂತ್ಯಕ್ಕೆ ಕಡಲ ಕಿನಾರೆ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿದೆ. ಇನ್ನು ಮಂಗಳೂರು ಪ್ರವಾಸೋದ್ಯಮದ ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ. ಮಂಗಳೂರಿನ ಪಣಂಬೂರು ಬೀಚ್ನಲ್ಲಿ ಪ್ಲೋಟಿಂಗ್ ಬ್ರಿಡ್ಜ್ ಆರಂಭವಾಗಿದ್ದು, ಪ್ರವಾಸಿಗರು ಮಸ್ತ್ ಎಂಜಾಯ್ ಮಾಡ್ತಿದ್ದಾರೆ. ತೇಲುವ ಸೇತುವೆಯಲ್ಲಿ ನಲಿದಾಡುತ್ತಿದ್ದಾರೆ. ಸಮುದ್ರದ ಮೇಲೆ ತೇಲುವ ಸೇತುವೆ ತೇಲುವ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು, ಇದು ಮಂಗಳೂರು ಪಣಂಬೂರು ಬೀಚ್ನಲ್ಲಿ ಕಂಡುಬಂದ ದೃಶ್ಯವಾಗಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಪ್ಲೋಟಿಂಗ್ ಬ್ರಿಡ್ಜ್ ಮಂಗಳೂರು ಬೀಚ್ನಲ್ಲಿ ಇರಲಿಲ್ಲ. ಹೀಗಾಗಿ ಪ್ಲೋಟಿಂಗ್ ಬ್ರಿಡ್ಜ್ ಕೊರತೆ ನೀಗಿಸಲು ಮಂಗಳೂರಿನ ಪಣಂಬೂರು ಬೀಚ್ನಲ್ಲಿ ತೇಲುವ ಸೇತುವೆ ಆರಂಭಿಸಲಾಗಿದೆ.
ಸದ್ಯ ಪ್ಲೋಟಿಂಗ್ ಬ್ರೀಡ್ಜ್ನ ಪ್ರವಾಸಿಗರಿಗೆ ಮುಕ್ತವಾಗಿದ್ದು ಪ್ರವಾಸಿಗರು ತೇಲುವ ಸೇತುವೆಯಲ್ಲಿ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ತೇಲುವ ಸೇತುವೆ 125 ಮೀಟರ್ ಉದ್ದವಿದ್ದು, ಅಲೆಗಳ ಅಬ್ಬರಕ್ಕೆ ಉಬ್ಬುತ್ತಾ ತಗ್ಗುತ್ತಾ ನಲಿದಾಡುವ ಸೇತುವೇ ಮೇಲೆ ಪ್ರವಾಸಿಗರು ಬ್ಯಾಲೆನ್ಸ್ ಮಾಡುತ್ತಾ ಕುಣಿದಾಡುತ್ತಾ ಖುಷಿ ಪಡುತ್ತಿದ್ದಾರೆ. ಫೋಟೋ ಸೆಲ್ಪಿ ಕ್ಲಿಕಿಸುತ್ತಾ, ಸಮುದ್ರ ಮೇಲೆ ನಡೆಯುತ್ತಿದ್ದೇವೆ ಅಂತ ಮನದೊಳಗೆ ಹಿಗ್ಗುತ್ತಾ ಎಂಜಾಯ್ ಮಾಡ್ತಿದ್ದಾರೆ.. ಇದಲ್ಲದೆ, ಜೆಟ್ ಸ್ಕೀ, ಪ್ಯಾರಾ ಸೈಲಿಂಗ್, ಬೋಟಿಂಗ್ ಮುಂತಾದ ಸಾಹಸ ಕ್ರೀಡೆಗಳು ಬೀಚ್ನಲ್ಲಿವೆ. ಒಟ್ಟಿನಲ್ಲಿ, ಪಣಂಬೂರಿನಲ್ಲಿ ಆರಂಭವಾದ ತೇಲುವ ಸೇತುವೆ ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತಿದ್ದು, ವರ್ಷಾಂತ್ಯ ಹಿನ್ನೆಲೆ ಸಾವಿರಾರು ಪ್ರವಾಸಿಗರು ಬೀಚ್ಗೆ ಬಂದು ತೇಲುವೆ ಸೇತುವೆ ಮೇಲೆ ಎಂಜಾಯ್ ಮಾಡುತ್ತಿದ್ದಾರೆ.