ಸಾವಿರ ಕೋಟಿಯ ಗಡಿ ತಲುಪಿದ ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ

ಉಡುಪಿ: ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹವು ಸಾವಿರ ಕೋಟಿ ರೂ.ಗಳ ಗಡಿ ತಲುಪಿದೆ ಎಂದು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿಧಿ ಸಂಗ್ರಹ ಅಭಿಯಾನಕ್ಕಾಗಿ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಕೈಗೊಂಡ ಸಂಚಾರದಿಂದ ಅತೀವ ಸಂತಸವಾಗಿದೆ. ಎಲ್ಲ ವರ್ಗದ ಜನ ತುಂಬು ಉತ್ಸಾಹದಿಂದ ದೇಣಿಗೆ ನೀಡುತ್ತಿರುವುದು ಹಿಂದು ಸಮಾಜದ ಸಂಘಟನಾತ್ಮ ದೃಷ್ಟಿಯಿಂದ ಒಂದು ಮಹತ್ವದ ಬೆಳವಣಿಗೆಯಾಗಿದೆ ಎಂದರು.

ಜಾತಿಯಾಧಾರಿತ ಮೀಸಲಾತಿಗಾಗಿ ಹೋರಾಟ ಸರಿಯಲ್ಲ. ಆರ್ಥಿಕತೆಯ ಆಧಾರದಲ್ಲಿ ಹಿಂದುಳಿದವರಿಗೆ ನ್ಯಾಯ ಸಿಗಲು ಆಯಾ ಜಾತಿಯ ಪ್ರಮುಖರು ಧ್ವನಿಯಾಗಬೇಕು. ಹಿಂದುಳಿದವರೊಳಗೆ ಇರುವ ಮುಂದುಳಿದವರೇ ಮೀಸಲಾತಿ ಸೌಲಭ್ಯ ಅನುಭವಿಸುತ್ತಿದ್ದಾರೆ ಎಂದು ಅನೇಕ ಹಿಂದುಳಿದ ಜಾತಿಗಳ ಸೌಲಭ್ಯ ವಂಚಿತರು ನಮ್ಮಲ್ಲಿ ಅವಲತ್ತುಕೊಂಡಿದ್ದಾರೆ ಎಂದು ಹೇಳಿದರು.

ರಾಮಮಂದಿರ ಮಾತ್ರ ನಿರ್ಮಾಣ ಗುರಿಯಲ್ಲ. ರಾಮರಾಜ್ಯ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ರಾಜ್ಯದ ಎಲ್ಲ ದೇವಳಗಳ ಸುತ್ತಲಿನ ಪ್ರದೇಶಗಳನ್ನು ದೇವಾಲಯ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ ಸಂರಕ್ಷಿಸಬೇಕು. ಇದರಿಂದ ಅನ್ಯ ಮತೀಯರ ಅತಿಕ್ರಮಣ ತಪ್ಪುತ್ತದೆ. ಭವಿಷ್ಯದ ಶಾಂತಿ ನೆಮ್ಮದಿಗಾಗಿ ಇದು ಅತೀ ಅವಶ್ಯ ಎಂದರು.

ಹಕ್ಕಿನ ನೆಲೆಯಲ್ಲಿ ರೈತರ ಪ್ರತಿಭಟನೆ ಸರಿ. ಆದರೆ ಮಾತುಕತೆಯ ಮೂಲಕ ಪರಿಹಾರಕ್ಕೆ ಕೇಂದ್ರ ಸರಕಾರ ಮುಕ್ತ ಅವಕಾಶ ನೀಡಿರುವಾಗಲೂ ಪ್ರತಿಭಟನೆ ನಡೆಸಿ ಜನಜೀವನಕ್ಕೆ ತೊಂದರೆ ಮಾಡುವುದು , ರಾಷ್ಟ್ರದ ಸಾರ್ವಭೌಮತೆಗೆ ಸವಾಲೆಸೆಯುವುದನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಉಡುಪಿ ಕಲ್ಸಂಕದ ವೃತ್ತಕ್ಕೆ ರಾಜ್ಯ ಸರಕಾರ ಜಗದ್ಗುರು ಶ್ರೀ ಮಧ್ವಾಚಾರ್ಯರ ಹೆಸರಿಡಬೇಕು ಎಂದು ಈ ವೇಳೆ ಆಗ್ರಹಿಸಿದರು.