ಮಂಗಳೂರು: ಸಮಾಜ ಕಾರ್ಯ ಶಿಕ್ಷಣ(MSW) ಕೇವಲ ಪಠ್ಯದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ನಿದರ್ಶನದಂತೆ ಅಪಾರ ಮೆಚ್ಚುಗೆ ಗಳಿಸುತ್ತಿದೆ ನಗರದ ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳ ತಂಡ. ಈ ವಿದ್ಯಾರ್ಥಿಗಳು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರ ಜೀವ ಉಳಿಸುವ ಮೂಲಕ ಮಾನವೀಯತೆ, ಸಮಯಪ್ರಜ್ಞೆ ಹಾಗೂ ಧೈರ್ಯದ ಮಾದರಿಯಾಗಿದೆ.
ಜೂನ್ 30ರಂದು ನಗರದ ಬಸ್ ನಿಲ್ದಾಣದ ಬಳಿ ಭಾರೀ ಮಳೆಯಿಂದ ಅಂಗಡಿಯ ದೊಡ್ಡ ಗಾಜಿನ ಫಲಕ ಒಡೆದು ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದ ವೃದ್ಧರ ಮೇಲೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕ್ಷಣಮಾತ್ರವೂ ವಿಳಂಬ ಮಾಡದೆ ನೆರವಿಗೆ ಧಾವಿಸಿದರು.
ಸಮಾಜಕಾರ್ಯ ಸ್ನಾತಕೋತ್ತರ (ಎಂ.ಎಸ್.ಡಬ್ಲ್ಯೂ.) ವಿಭಾಗದ ಜಸ್ಟಿನ್ ವಿ. ಜಾಯ್, ತರುಣ್ ಬೋಮಿಕ್, ಅಲಿಟ್ ಮ್ಯಾಥ್ಯೂ, ಅಜಯ್ ಕಿರಣ್ ಹಾಗೂ ಸಮಾಜಕಾರ್ಯ, ಅರ್ಥಶಾಸ್ತ್ರ ಮತ್ತು ಇತರೆ ವಿಭಾಗಗಳ ವಿದ್ಯಾರ್ಥಿಗಳಾದ ಕೆವಿನ್, ವೈಶಾಕ್, ಫ್ರೆನಾನ್ ಮತ್ತು ಸ್ಪಂದನ್ ಗಾಯಾಳುವಿನ ಸುರಕ್ಷತೆಯನ್ನು ಖಚಿತಪಡಿಸಿ ತಕ್ಷಣವೇ ಕೆಎಂಸಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ವಿದ್ಯಾರ್ಥಿಗಳ ಸಮಯೋಚಿತ ಕ್ರಮದಿಂದ ಗಾಯಾಳುವಿಗೆ ತುರ್ತು ಚಿಕಿತ್ಸೆ ದೊರೆತು ಜೀವ ಉಳಿಯುವಲ್ಲಿ ನೆರವಾಯಿತು.
ವಿದ್ಯಾರ್ಥಿಗಳ ಈ ಕಾರ್ಯವನ್ನು ಮೆಚ್ಚಿದ ಕೆಎಂಸಿ ಆಸ್ಪತ್ರೆ, ತುರ್ತು ಸಂದರ್ಭದಲ್ಲಿ ತೋರಿದ ಸಮಯಪ್ರಜ್ಞೆ ಹಾಗೂ ಮಾನವೀಯ ಸೇವೆಯನ್ನು ಗುರುತಿಸಿ ಪ್ರಶಂಸಾ ಪ್ರಮಾಣಪತ್ರ ನೀಡಿ ಸನ್ಮಾನಿಸಿತು.
ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಕುಲಪತಿಗಳು ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿ, ಸಂಕಷ್ಟದ ಸಂದರ್ಭದಲ್ಲಿ ಅವರು ತೋರಿದ ಧೈರ್ಯ, ಕ್ಷಿಪ್ರ ಸ್ಪಂದನೆ ಮತ್ತು ನಿಸ್ವಾರ್ಥ ಸೇವೆಯು ವಿಶ್ವವಿದ್ಯಾಲಯದ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವುದರ ಜೊತೆಗೆ ಇತರ ಯುವಕರಿಗೂ ಪ್ರೇರಣೆಯಾಗಲಿದೆ ಎಂದು ಅಭಿನಂದಿಸಿದರು.

















