ಪೆರ್ಡೂರು ಅಪ್ರಾಪ್ತ ಬಾಲಕಿಯ ಅಪಹರಣ: ಆರೋಪಿಯನ್ನು ತಕ್ಷಣವೇ ಬಂಧಿಸಿ; ಹಿಂದೂ ಸಂಘಟನೆಗಳ ಆಗ್ರಹ

ಹಿರಿಯಡಕ: ಪೆರ್ಡೂರಿನ ಅಪ್ರಾಪ್ತ ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಿಂದೂಪರ ಸಂಘಟನೆಯ ಸದಸ್ಯರು ಹಿರಿಯಡಕ ಪೊಲೀಸ್ ಠಾಣೆಯ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಠಾಣೆಯ ಎದುರು ಜಮಾಯಿಸಿದ್ದ ಹಿಂದೂ ಕಾರ್ಯಕರ್ತರು
ಘಟನೆ ನಡೆದು ಮೂರು ದಿನ ಕಳೆದರೂ ಬಾಲಕಿ ಪತ್ತೆಯಾಗದೆ ಇರುವುದನ್ನು ಖಂಡಿಸಿದರು.

ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಣ ಮಾಡಿದ್ದಾನೆ. ಇದೊಂದು ಲವ್ ಜಿಹಾದ್ ಆಗಿದೆ. ಈ ಘಟನೆಗೆ ಕುಮ್ಮಕ್ಕು ನೀಡಿದ ಎಲ್ಲರನ್ನೂ ತಕ್ಷಣವೇ ಬಂಧಿಸಬೇಕು ಎಂದು ಹಿಂದೂ ಸಂಘಟನೆಯ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡಿವೈಎಸ್ಪಿ ಜೈಶಂಕರ್ ಮೂಲಕ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜೈಶಂಕರ್, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ಆರೋಪಿಯ ಚಲನವಲನಗಳ ಬಗ್ಗೆ ನಿಗಾ ಇರಿಸಲಾಗಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.

ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಮಾತನಾಡಿ, ಇದು ಲವ್ ಜಿಹಾದ್. ಇದರ ಹಿಂದೆ ಮತಾಂಧ ಸಂಘಟನೆಗಳ ಕೈವಾಡವಿದೆ. ಯುವಕನ ಜೊತೆ ಕೈಜೋಡಿಸಿರುವ ವ್ಯಕ್ತಿಗಳನ್ನು ಮೊದಲು ಬಂಧಿಸಿ ವಿಚಾರಣೆ ನಡೆಸಿದ್ದರೆ ಬಾಲಕಿಯನ್ನು ಪತ್ತೆಹಚ್ಚಲು ಸುಲಭವಾಗುತ್ತದೆ. ಇನ್ನೆರಡು ದಿನದಲ್ಲಿ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.