ಶಿಕಾರಿಗೆ ಹೊರಟವರನ್ನು ನೋಡುವಾಗ ನನಗೆ ಅದೆಂಥದೋ ಖುಷಿ-ಕುತೂಹಲ. ಕೇಪಿನ ಕೋವಿಯ ನಳಿಕೆಗೆ ತೆಂಗಿನ ಒಣಸಿಪ್ಪೆಯ ನಾರಿನ ಜತೆಗೆ ಗುಂಡುಗಳನ್ನು ತುಂಬಿ ಕಬ್ಬಿಣದ ಸರಳಿನಿಂದ ಒಳಗೆ ತಳ್ಳುವ ಪ್ರಕ್ರಿಯೆಯಲ್ಲಿ ಬೇಟೆಗಾರನಲ್ಲಿ ಕಂಡುಬರುವ ತನ್ಮಯತೆ ಬಹಳ ಸುಂದರವಾಗಿರುತ್ತದೆ. ಭರ್ಜರಿ ಊಟದ ಬಳಿಕ ತಾಂಬೂಲ ಹಾಕಿಕೊಳ್ಳುವವರ ಹಾಗೆ.
ಸಾಮಾನ್ಯವಾಗಿ ಬೇಟೆಗಾರರು ಬೇರೆಯವರ ಕೈಗೆ ತಮ್ಮ ಕೋವಿಯನ್ನು ಕೊಡುವುದಿಲ್ಲ. ಆದರೂ ನನ್ನ ಕುತೂಹಲ ನೋಡಿ ನನ್ನ ಪರಿಚಯಸ್ಥರೊಬ್ಬರು ನನ್ನ ಕೈಗೆ ಖಾಲಿ ಕೋವಿ ಕೊಟ್ಟಿದ್ದರು. ಬಹಳ ಖುಷಿಯಿಂದ ಎತ್ತಿಕೊಂಡು, ಸುಮ್ಮನೆ ಒಂದೆಡೆ ಗುರಿ ಇಟ್ಟು ನೋಡಿದ್ದೆ. ರೈಫಲ್ ಗಳಲ್ಲಿರುವಂತೆ ಗುರಿ ನೋಡಲು ಇದರಲ್ಲಿ ಫ್ರಂಟ್ ಸೈಟ್, ರಿಯರ್ ಸೈಟ್ ಇರುವುದಿಲ್ಲ. ಹಾಗಾಗಿ ನಿಖರವಾಗಿ ಗುರಿಯಿಟ್ಟು ಹೊಡೆಯಲು ಅಷ್ಟೊಂದು ಅಂದಾಜು ಬೇಕು. ಅದಕ್ಕೆ ಅನುಭವವೂ ಬೇಕು ಎಂದೆಲ್ಲ ಯೋಚಿಸುತ್ತ ಜಾಗ್ರತೆಯಿಂದ ಮರಳಿಸಿದ್ದೆ.
ಬಾಗಿದ ಕೋಲಿಗೆ ದಾರ ಕಟ್ಟಿ, ಕಮಿನಿಷ್ಟ್ ಗಿಡಗಳನ್ನು ಮುರಿದು ಬಾಣಗಳನ್ನಾಗಿಸಿ, ಎಳೆಯರ ರಾಮಾಯಣದ ಯುದ್ಧಕಾಂಡವನ್ನು ನೆನಪಿಸಿಕೊಂಡು, ಏಕಲವ್ಯನಂತೆ ಬಿಲ್ವಿದ್ಯೆ ಅಭ್ಯಾಸ ಮಾಡುವಾಗ ನನಗೆ ಈ ‘ಅಂದಾಜು’ ಮಾಡುವ ಕಲೆ ಅಲ್ಪಸ್ವಲ್ಪ ಸಿದ್ಧಿಸಿತ್ತು ಎನ್ನಬಹುದು. ಅವರೆಲ್ಲ ಬಾಣದಿಂದ ಬೆಂಕಿ, ನೀರು ಇತ್ಯಾದಿ ಸೃಷ್ಟಿಸುವಾಗ ನಾನು ಕನಿಷ್ಠ ಗೇರು ಹಣ್ಣನ್ನಾದರೂ ಉದುರಿಸಬೇಕೆಂದು ಹಠ ತೊಟ್ಟಿದ್ದೆ. ಆದರೆ ಒಣಕಲು ಬಾಣಗಳು ಗೇರುಹಣ್ಣಿನಲ್ಲೇ ಸಿಲುಕಿಕೊಂಡು ಬಿಡುತ್ತಿದ್ದವು! ಹಣ್ಣಿಗೆ ಬಾಣ ಬಿಡುವ ಬದಲು ಹಣ್ಣಿನ ತೊಟ್ಟಿಗೆ ಬಾಣ ಬಿಟ್ಟರೆ ಹಣ್ಣು ಉದುರುತ್ತದೆ ಎಂದು ಗೊತ್ತಾಯಿತಾದರೂ ಅದಕ್ಕೆ ಅಷ್ಟು ಪರಿಣತಿ ನನ್ನಲ್ಲೆಲ್ಲಿದೆ? ಆದರೂ ಅದಕ್ಕೊಂದು ಉಪಾಯ ಇತ್ತು. ಕಮಿನಿಷ್ಟ್ ಗಿಡಗಳಲ್ಲಿ ಕವಲುಗಳು ಸಮಾನವಾಗಿ ಹೊರಡುತ್ತವೆ. ಅವುಗಳಿಂದ ತ್ರಿಶೂಲದಂಥ ಬಾಣಗಳನ್ನು ಮಾಡಬಹುದು. ಅವುಗಳನ್ನು ಪ್ರಯೋಗಿಸಿದ್ದಾಯಿತು. ಆದರೆ ಅವು ಹಣ್ಣನ್ನು ಉದುರಿಸಿದರೂ ಅವು (ಬಾಣಗಳು) ಮರದಲ್ಲೇ ಸಿಲುಕಿಕೊಳ್ಳುತ್ತಿದ್ದವು.
ಚೆನ್ನಾಗಿ ಅಭ್ಯಾಸ ಮಾಡೋಣವೆಂದರೆ ಗುರಿಯ ಸಮಸ್ಯೆ ನೋಡಿ?!! ಒಮ್ಮೆ ಒಂದು ಮಧ್ಯಾಹ್ನ, ಪೇಪರ್ ರಾಕೆಟ್ ನಂತೆ ಹಾರಿ ಹೂವಿನಂತೆ ಲ್ಯಾಂಡ್ ಆಗುವ, ಮೊನೆಯಿಲ್ಲದ, ಈ ಹಗುರ ಒಣಕಲು ಕಡ್ಡಿ ಬಾಣದಿಂದ ಏನಾಗುತ್ತದೆ ಎಂದುಕೊಳ್ಳುತ್ತ, ಕೋಳಿಯೊಂದಕ್ಕೆ ಗುರಿಯಿಟ್ಟು ಮೆಲ್ಲನೆ ಎಳೆದು ಬಿಟ್ಟಾಗ ಚಾಣಾಕ್ಷ ಕಂತ್ರಿಕೋಳಿ ತಪ್ಪಿಸಿಕೊಂಡು ಫಜೀತಿಯಾಗಿತ್ತು! ಕೋಳಿಯನ್ನು ಕೊಲ್ಲುವ ಉದ್ದೇಶವಿರಲಿಲ್ಲ. ಕೋಳಿಗೆ ತಾಗಿದರೂ ಏನೂ ಆಗುತ್ತಿರಲಿಲ್ಲ. ತಾಗದೇ ಇದ್ದುದೇ ಸಮಸ್ಯೆಯಾಗಿತ್ತು. ಕೋಳಿಯ ಹಿಂದೆ ಇದ್ದ ನೀರಿನ ಪೈಪ್ ಅನ್ನು ನಾನು ಗಮನಿಸಿರಲಿಲ್ಲ. ಗುರಿಯ ಮುಂದೆ ಅದು ಗೌಣವಾಗಿತ್ತು- ಮತ್ಸ್ಯಯಂತ್ರ ಭೇದಿಸುವ ವೇಳೆ ಅರ್ಜುನನಿಗೆ ಮೀನಿನ ಕಣ್ಣು ಮಾತ್ರ ಕಂಡಂತೆ! ಬಾಣ ಪೈಪ್ ಗೆ ತಗುಲಿ ನೀರು ಲೀಕ್ ಆಗತೊಡಗಿತ್ತು. ಬಾಣ ಬಲವಾಗಿತ್ತೊ, ಬಾಣಕ್ಕೆ ಹಾಕಿದ ಶಕ್ತಿಯ ಅಂದಾಜಿನಲ್ಲಿ ಹೆಚ್ಚು ಕಮ್ಮಿಯಾಯಿತೊ, ಪೈಪ್ ದುರ್ಬಲವಾಗಿತ್ತೊ ನನಗೆ ತಿಳಿಯಲಿಲ್ಲ. ತೋಟದಲ್ಲಿ ಕೆಲಸ ಮಾಡಿ, ಉಂಡು, ಕೋಳಿ ನಿದ್ದೆಯಲ್ಲಿದ್ದ ಅಜ್ಜನನ್ನು ಕೋಳಿಯ ಕೂಗು ಎಬ್ಬಿಸಿತ್ತು. ಪರಮ ಅಪರಾಧಿ ಭಾವದಿಂದ ನಾನು ಅಲ್ಲಿ ನಿಂತು ಕೈ ಕೈ ಹಿಸುಕಿಕೊಂಡು ನಿಂತಿದ್ದೆ!
ಇನ್ನು, ಎನ್ ಸಿ ಸಿಯಲ್ಲಿ ಪಾಯಿಂಟ್ ಟು ಟು (.22) ರೈಫಲ್ ನಲ್ಲಿ 5 ಸುತ್ತು ಗುಂಡು ಹಾರಿಸುವ ವೇಳೆ ಫ್ರಂಟ್ ಸೈಟ್, ರಿಯರ್ ಸೈಟ್ ಗಳ ಹೊರತಾಗಿಯೂ ಯಾವ ಅಂದಾಜೂ ನೆನಪಿಗೆ/ ನೆರವಿಗೆ ಬರಲಿಲ್ಲ! ಗುಂಡುಗಳು ಎಲ್ಲೆಲ್ಲೋ ಹಾರಿದ್ದವು. ಹಾರುವ ಬಾಣವನ್ನಾದರೂ ಕಾಣಬಹುದು; ಹಾರುವ ಗುಂಡನ್ನು ಕಾಣಲಾದೀತೇ?
ಹೈಸ್ಕೂಲಿನಲ್ಲಿ ಮಿತ್ರನೊಬ್ಬ ಕೊಡೆಯ ಸ್ಟೀಲ್ ಭಾಗವನ್ನು ಬಳಸಿ ಸಣ್ಣ ಕೋವಿ ಮಾಡುವ ಬಗೆಯನ್ನು ಹೇಳಿಕೊಟ್ಟಿದ್ದ. ಅದನ್ನು ನಾನು ಮಾಡಿದ್ದೆ ಕೂಡ. ಆ ಬಳಿಕ ನಾನು ತರಗತಿಯಲ್ಲಿ ಪಾಠ ಕೇಳುವ ಬದಲು ಆ ಕೋವಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಬಗ್ಗೆ ಸ್ಕೆಚ್ ಗಳನ್ನು ಬರೆಯುತ್ತ, ಹಗಲುಗನಸು ಕಾಣುತ್ತ ಕೂರುತ್ತಿದ್ದೆ. ನಮ್ಮದು ವಸತಿ ಶಾಲೆಯಾದ್ದರಿಂದ ನಾನೊಂದು ಕಡೆ, ಕೋವಿಯೊಂದು ಕಡೆ ಆಗಿತ್ತು ಎಂಬುದನ್ನು ನೀವು ಗಮನಿಸಬೇಕು! ಮತ್ತೊಮ್ಮೆ ಮನೆಗೆ ಹೋಗಿದ್ದಾಗ ಆ ಕೋವಿ ನಾಪತ್ತೆಯಾಗಿತ್ತು!
ಕೋವಿ ಬೇಟೆಗಾರನ ಪ್ರತಿಷ್ಠೆಯೂ ಹೌದು. ಅದಕ್ಕೆ ಬೇಟೆಗಾರರ ವಲಯದಲ್ಲಿ ಅದರದೇ ಅದ ಗೌರವವಿರುತ್ತದೆ. ಸಿಕ್ಕ ಬೇಟೆಯ ಮಾಂಸದ ಒಂದು ಭಾಗ ಕೋವಿಯ ಮರ್ಯಾದೆಗೆ ಎಂದು ಹೋಗುತ್ತದೆ.
ಬೇಟೆಗಾರರು ತಮ್ಮ ಅನುಭವದ ಕತೆಗಳನ್ನು ಒಮ್ಮೊಮ್ಮೆ ಹಂಚಿಕೊಳ್ಳುತ್ತಾರೆ. ಆ ರೀತಿಯ ಪ್ರಸಂಗಗಳು ಬರುವುದೂ ಈಗ ಬಹಳ ವಿರಳವಾದರೂ ಅವು ಅದ್ಭುತವಾಗಿರುತ್ತವೆ. ನನ್ನ ಕೈಗೆ ಕೋವಿ ಕೊಟ್ಟವರು ಒಮ್ಮೆ ರಾತ್ರಿ ಶಿಕಾರಿಗೆ ಹೋಗಿದ್ದಾಗ ಇವರು ಹೊಡೆದ ಹಂದಿಯನ್ನು ರಣ (ಪಿಶಾಚಿ) ತಿನ್ನಲು ಹವಣಿಸಿತಂತೆ. ಮರಗಳನ್ನು ಅಲ್ಲಾಡಿಸಿ ಬೆದರಿಸಿತಂತೆ. ಇವರು ಬೇಟೆಯ ಮೇಲೆ ಕೋವಿ ಮತ್ತು ಬಲಗಾಲನ್ನು ಊರಿ, ಹೆದರದೆ ನಿಂತರಂತೆ-‘ಇದರ ಮೇಲೆ ನನ್ನ ಅಧಿಕಾರವಿದೆ. ನಡಿ’ ಎನ್ನುವಂತೆ. ಹಿಂದೆ ರಾಜ- ಮಹಾರಾಜರು ಹುಲಿಯನ್ನು ಕೊಂದು ಕೋವಿಯನ್ನು ನೆಟ್ಟಗೆ ನಿಲ್ಲಿಸಿಕೊಂಡು ಮೀಸೆ ತಿರುವುವ ಚಿತ್ರಗಳನ್ನು ನೆನಪಿಸಿಕೊಳ್ಳಿ. ಪಿಶಾಚಿ ಇತ್ತೋ ಇಲ್ಲವೋ, ಬೇಟೆಗೆ ಹೋಗುವವರಿಗೆ ಧೈರ್ಯ ಅತ್ಯಗತ್ಯ. ಏಕೆಂದರೆ, ಬೇಕು ಬೇಕೆಂದಾಗ ಟಾರ್ಚ್ ಬೆಳಗಲಾಗುವುದಿಲ್ಲ (ಕೆಲವೊಮ್ಮೆ ಟಾರ್ಚ್ ಕೈಕೊಡುವುದೂ ಇದೆ), ಬರಿಗಾಲಿಗೆ ಇರುವ ಗ್ರಿಪ್ ಚಪ್ಪಲಿಗೆ ಇರುವುದಿಲ್ಲ. ಕೆಸರು, ಮುಳ್ಳು, ಕಲ್ಲು, ಪೊದೆ ಇತ್ಯಾದಿ ಅಡ್ಡಿಗಳೆಲ್ಲ ಗುರಿಯ ಮುಂದೆ ದೊಡ್ಡ ವಿಷಯವಾಗುವುದಿಲ್ಲ..
ಬೇಟೆಯ ರೋಚಕ ಕಥೆಗಳನ್ನು ಕೇಳಬೇಕು. ಕೆಲವು ವರ್ಷಗಳ ಹಿಂದೆ, ನಮ್ಮ ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದ ಕಾಲದಲ್ಲಿ ರಾತ್ರಿ ಪೆಟ್ರೊಮ್ಯಾಕ್ಸ್ ಬೆಳಕಿನಲ್ಲಿ ಕೆಲವು ಕಾರ್ಯಕ್ರಮಗಳು ನಡೆಯುವಾಗ ಜನರ ಕೈಯಲ್ಲಿ ಇಂದಿನಂತೆ ಮೊಬೈಲ್ ಫೋನ್ ಇರಲಿಲ್ಲವಾಗಿ ಅನುಭವಸ್ಥರು ತಮ್ಮ ಸಮಕಾಲೀನರೊಂದಿಗೆ ಹರಟುತ್ತ ಕುಳಿತಾಗ ಕಥೆಗಳು ಹೊರಬರುತ್ತಿದ್ದವು. ಯುವಕರು ಅದನ್ನು ಕೇಳುತ್ತ ಬೆರಗುಗಣ್ಣುಗಳಿಂದ ಕುಳಿತಿರುತ್ತಿದ್ದರು. ಬೇಟೆ, ಭೂತ-ಪಿಶಾಚಿ ಕಥೆಗಳು ಇಲ್ಲಿ ಕೇಳಲು ಸಿಗುತ್ತಿದ್ದವು. ಯುವಕರ ಗುಂಪುಗಳೂ ಇರುತ್ತಿದ್ದವು.
ಯಾವ ಗುಂಪಿನ ಕಥೆ ಅರ್ಥವಾಗುತ್ತದೋ ಆ ಕಥೆಗೆ ಕಿವಿಯಾದರೆ ಮಜಾ ಬರುತ್ತಿತ್ತು.
ಜಿಮ್ ಕಾರ್ಬೆಟ್, ಕೆನೆತ್ ಆ್ಯಂಡರ್ಸನ್ ನಂಥವರು ಹಿಂದೆ ಭಾರತದಲ್ಲಿ ಹಲವು ನರಭಕ್ಷಕ ಹುಲಿಗಳನ್ನು ಬೇಟೆಯಾಡಿದವರು. ಅವರು ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಕನ್ನಡದ ಲೇಖಕರು ಅವುಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದಲ್ಲಿ ಕೆದಂಬಾಡಿ ಜತ್ತಪ್ಪ ರೈ ಗಳಂಥ ಲೇಖಕರು ಕೂಡ ಬೇಟೆ ಕಥೆಗಳನ್ನು ಬರೆದಿದ್ದಾರೆ. ಅವುಗಳನ್ನು ಓದಬೇಕು. ನೀವೇ ಬೇಟೆಗೆ ಹೋದಂಥ ಅನುಭವವಾಗುತ್ತದೆ.
ಸ್ವತಃ ಬೇಟೆಗೆ ಹೋಗುವ ಅವಕಾಶ ಸಿಗುವುದಂತೂ ಈಗಿನ ಸಮಯದಲ್ಲಿ ನನ್ನ ಪ್ರಕಾರ ಕಷ್ಟಸಾಧ್ಯ. ಬೇಟೆಗೆ ಹೋಗುವ ಅವಕಾಶ ನನಗೂ ಹಿಂದೆ ಒಂದು ಬಾರಿ ಸಿಕ್ಕಿತ್ತು. ಆ ಬೇಟೆ ಹಗಲಿನಲ್ಲಿ ನಡೆದಿತ್ತು. ಅತ್ಯಲ್ಪ ಸಮಯದ್ದೂ ಆಗಿತ್ತು. ಆ ದಿನದ ಬೇಟೆಯಲ್ಲಿ ಏನೂ ಮಜಾ ಇರಲಿಲ್ಲ. ಸಫಲತೆಯೂ ಸಿಗಲಿಲ್ಲ. ಮತ್ತೊಂದು ಬಾರಿ ಇನ್ನೊಬ್ಬ ಬೇಟೆಗಾರರ ಜತೆಗೆ ರಾತ್ರಿಯ ವೇಳೆ ಬೇಟೆಗೆ ಹೋಗಿದ್ದೆ. ಇಬ್ಬರೇ. ನನ್ನ ಕೈಯಲ್ಲಿ ಗುಂಡಿನ ಚೀಲವನ್ನು ಕೊಟ್ಟಿದ್ದರು.. ಗೂಬೆಯೊಂದು ದಿಗ್ಗನೆ ಹಾರಿ ಹೋಗಿದ್ದು, ಸ್ವಲ್ಪ ಮುಂದೆ ಹೋದಾಗ ನೆಲದ ಮೇಲೆ ಜೋಡಿ ಕಣ್ಣುಗಳು ಹೊಳೆದದ್ದು, ಗುಂಡು ಹಾರಿದ್ದು, ಏನೂ ಸಿಗದೇ ಹೋದದ್ದು.. ಇಷ್ಟೇ ನಡೆದದ್ದು.
ಆದರೂ ಬೇಟೆಯ ಕತೆಗಳನ್ನು ಓದಿ, ಕೇಳಿ, ನೋಡಿದ ಮೇಲೆ, ಬೇಟೆ ಎಂಬುದು ಪ್ರಾಚೀನ ಕಾಲದಿಂದಲೂ ಪ್ರಚಲಿತ, ಪ್ರಸಿದ್ಧವಾದುದೂ ಆಗಿರುವುದರಿಂದ ಬೇಟೆಯ ಬಗ್ಗೆ ಕುತೂಹಲ ಇದ್ದೇ ಇತ್ತು.
ಬೇಟೆಯ ರೋಚಕತೆ ಬಗ್ಗೆ ನನಗೆ ಸ್ವಲ್ಪ ಅನುಭವ ದೊರಕಿದ್ದು ಅದೊಂದು ದಿನ. ಮಳೆಗಾಲದ ಸಮಯವದು. ಬೆಳಗ್ಗೆ ಸುಮಾರು 11.30 ಆಗಿರಬಹುದು. ಬೇಟೆಗೆ ಬಂದಿದ್ದವರ ಪರಿಚಯವಿಲ್ಲ ನನಗೆ. ಹಿಂದೊಮ್ಮೆ ನನಗೆ ಕೋವಿ ಕೊಟ್ಟವರು ತಂಡದ ನಾಯಕರು. ನಾನು ಎಲ್ಲೊ ಹೊರಗಡೆ ಹೋಗಿ ಬರುತ್ತಿದ್ದಾಗ ತಂಡ ಕಾಡ ನಡುವಿನ ಕಚ್ಚಾರಸ್ತೆಯಲ್ಲಿ ಸಾಗಿ ಬರುತ್ತಿತ್ತು. ಸನಿಹದಲ್ಲೇ ನನ್ನ ಮನೆಯಿತ್ತು. “ಬರ್ಪನಂಬೆ (ಬರ್ತೀಯೇನೊ)?” ಅಂದರು. ಅಷ್ಟೇ ಬೇಕಿತ್ತು ನನಗೆ. ಮನೆಗೆ ಓಡಿ ಹೋಗಿ, ಬಟ್ಟೆ ಬದಲಿಸಿ ಬಂದು ತಂಡ ಸೇರಿಕೊಂಡೆ. ಸುಮಾರು ಹತ್ತು-ಹದಿನಾಲ್ಕು ಮಂದಿಯ ಆ ತಂಡದಲ್ಲಿ ನಾನೇ ಕಿರಿಯವ. ನಾಲ್ಕು ಮಂದಿ ಬಂದೂಕಿನವರು. ಅವುಗಳಲ್ಲಿ ಒಂದು ಕೇಪಿನ ಕೋವಿ. ಉಳಿದವು ತೋಟೆಯವು. ಕಾಡುಹಂದಿಗಳ ಸುಳಿವು ಇದ್ದಿತ್ತು ತಂಡಕ್ಕೆ. ಕೋವಿಯವರು ಆಯಕಟ್ಟಿನ ಜಾಗಗಳಲ್ಲಿ ನಿಂತ ಸೂಚನೆ ದೊರೆತ ಕೂಡಲೇ ಉಳಿದ ಹತ್ತು ಮಂದಿ ಗುಡ್ಡದ ಮೇಲಿನಿಂದ ಕೆಳಕ್ಕೆ ಸದ್ದು ಮಾಡುತ್ತ, ಪೊದೆಗಳನ್ನು ಬಡಿಯುತ್ತ ಹೋಗಬೇಕು. ಹಂದಿಗಳು ಬೆದರಿ ಓಟಕ್ಕಿತ್ತು ಕೋವಿಯ ಗುಂಡುಗಳಿಗೆ ಬಲಿಯಾಗಬೇಕು. ಇದು ಯೋಜನೆ.ಬೇಟೆಗಾರರಿಗೆ, ಅವರ ಸಹಚರರಿಗೆ ಕಾಡಿನಲ್ಲಿ ಯಾವ ಭಾಗದಲ್ಲಿ ಯಾವ ಪ್ರಾಣಿ ಇರುತ್ತದೆ, ಯಾವ ದಾರಿಯಲ್ಲಿ ಓಡಾಡುತ್ತದೆ ಇತ್ಯಾದಿ ಎಲ್ಲ ಅರಿವು ಇರುತ್ತದೆ. ಪ್ರಾಣಿಗಳ ಹೆಜ್ಜೆ ಗುರುತು ಹಳೆಯದೋ, ಇತ್ತೀಚಿನದ್ದೋ ಎಂಬುದೋ ತಿಳಿಯುತ್ತದೆ. ಅವರೆಲ್ಲ ಕೂಗು ಹಾಕುತ್ತ ಗುಡ್ಡ ಇಳಿಯಲಾರಂಭಿಸಿದರು. ನನ್ನ ಪರಿಚಯದವರು ಕೋವಿಯವರಾಗಿದ್ದರು. ಹಾಗಾಗಿ ಅವರು ನನ್ನ ಜತೆ ಇರಲಿಲ್ಲ. ಕೋವಿಯವರು ಆಯಕಟ್ಟಿನ ಜಾಗದಲ್ಲಿ ಸನ್ನದ್ಧರಾಗಿ ನಿಂತಿರುತ್ತಾರೆ. ಉಳಿದವರ ಪರಿಚಯ ನನಗಿರಲಿಲ್ಲ. ನಾನು ಒಬ್ಬರನ್ನು ಪರಿಚಯ ಮಾಡಿಕೊಂಡು ಅವರನ್ನು ಹಿಂಬಾಲಿಸಿದೆ. ಅವರು ಸ್ವಲ್ಪ ಅಂತರ ಕಾಯ್ದುಕೊಂಡು ಸಾಗುವಂತೆ ನನಗೆ ಸೂಚಿಸಿದರು. ಏಕೆಂದರೆ, ಬೇಟೆಗಾರರ ತಂಡ ಇಡೀ ಗುಡ್ಡವನ್ನು ಬಳಸಿ ಸಾಗಬೇಕು. ಅಥವಾ ಆ ರೀತಿ ಹಂದಿಗಳಿಗೆ ಭಾಸವಾಗಬೇಕು. ಅವು ನಿರ್ವಾಹವಿಲ್ಲದೆ ಗುಡ್ಡದ ಕೆಳ ಭಾಗಕ್ಕೆ ಅಥವಾ ಅಟ್ಟಿದ ವಿರುದ್ಧ ದಿಕ್ಕಿಗೆ ಓಡಬೇಕು. ಹಾಗಾಗಿ ನಾನೂ ಒಂದಿಷ್ಟು ಅಂತರ ಕಾಯ್ದುಕೊಂಡು ಪೊದೆಗಳನ್ನು ಬಡಿಯುತ್ತ ಗುಡ್ಡ ಇಳಿಯತೊಡಗಿದೆ..
ಕೈಯಲ್ಲಿ ಇದ್ದುದು ಬೆತ್ತ ಮಾತ್ರ!
ಕಾಡು ದಟ್ಟವಾಗಿತ್ತು. ದೈತ್ಯ ಮರಗಳು, ಅವುಗಳನ್ನು ಆಧರಿಸಿ ಬೆಳೆದ ದಪ್ಪ ದಪ್ಪದ ಬಳ್ಳಿಗಳು, ಪೊದೆಗಳು, ಕಾಲಿಗೆ ಸಿಲುಕಿಕೊಳ್ಳುವ ಸಣ್ಣ ಸಣ್ಣ ಬಳ್ಳಿಗಳು, ಮುಳ್ಳಿನ ಗಿಡಗಳು, ಸತ್ತು ಬಿದ್ದಿರುವ ಮರಗಳು ನಮ್ಮನ್ನು ಸಲೀಸಾಗಿ ಸಾಗಲು ಬಿಡುವುದಿಲ್ಲ. ಆದರೆ ಉಳಿದವರೆಲ್ಲರ ಬಳಿ ಕತ್ತಿ ಇತ್ತು. ಅವರು ಅಡ್ಡಿಗಳನ್ನೆಲ್ಲ ನಿವಾರಿಸಿ ಮುಂದೆ ಸಾಗುತ್ತಿದ್ದರು. ಎಲ್ಲರೂ ಕತ್ತಿ ಯಾಕೆ ತಂದಿದ್ದರು ಎಂಬುದು ನನಗಾಗ ಅರ್ಥವಾಯಿತು. ಆದರೆ ನನ್ನ ಕೈಯಲ್ಲಿ ಇದ್ದುದು ಕೇವಲ ಒಂದು ಬೆತ್ತ ಮಾತ್ರ! ಅದರಿಂದ ಪೊದೆಗಳಿಗೆ ಜೋರಾಗಿ ಹೊಡೆದರೆ ಅದು ಮುರಿದು ಹೋಗುವುದು ಖಚಿತ. ಅದಕ್ಕೆ ಸತ್ತು ಹೋದ ಮರವೊಂದರ ರೆಂಬೆಯನ್ನು ಮುರಿದುಕೊಂಡೆ. ಅದು ಗದೆಯಂತೆ ಬಲವಾಗಿತ್ತು. ಭಾರವೂ ಇತ್ತು. ಸದ್ಯಕ್ಕೆ ಇದೇ ಗತಿ ಎಂದುಕೊಂಡು ಪೊದೆಗಳ ಎಡೆಯಲ್ಲಿ ನುಗ್ಗುತ್ತ, ಬಳ್ಳಿಗಳ ಅಡಿ ಬಗ್ಗುತ್ತ ಮುಂದೆ ಸಾಗಿದೆ. ಮುಂದೆ ಸಾಗಿದಾಗ ಆ ಇಳಿಜಾರು ಗುಡ್ಡದ ತಪ್ಪಲು ಸಮೀಪವಾಗುತ್ತಿತ್ತು. ನೀರಿನ ಒಸರು ಹಳ್ಳವಾಗಿ ಹರಿಯುತ್ತಿತ್ತು. ಅಲ್ಲಿಯೇ ಎಲ್ಲರೂ ಒಟ್ಟಾಗಿದ್ದರು. ಬೇಟೆ ಸಿಕ್ಕಿರಲಿಲ್ಲ! ಆದರೆ ಅಲ್ಲಿಯೇ ಸಮೀಪದ ಪೊದೆಯಿಂದ ತಪ್ಪಿಸಿಕೊಂಡು ಓಡಿ ಹೋಗಿತ್ತು ಎಂಬುದು ಅನಂತರ ತಿಳಿಯಿತು.
ಕಾರ್ಯಾಚರಣೆ: ಹಂತ ಎರಡು!
ಈ ಕಾಡಿನಲ್ಲಿ ಹಲವು ಹಂದಿಗಳಿವೆಯಂತೆ. ಹಾಗಾಗಿ ಈಗ ಎರಡನೇ ಹಂತದ ಕಾರ್ಯಾಚರಣೆ. ಇದರಲ್ಲಿ ಈಗ ಇಳಿದ ಗುಡ್ಡವನ್ನು ಪುನಃ ಹತ್ತಿ ಮತ್ತೆ ಅಡ್ಡವಾಗಿ ಸಾಗಬೇಕು. ಏಕೆಂದರೆ ಆ ಬದಿಯಲ್ಲಿ ನದಿಯಿದೆ. ಒಂದು ವೇಳೆ ಆ ಪಾರ್ಶ್ವದಲ್ಲಿ ಇನ್ನೊಂದು ಹಂದಿ ಇದ್ದರೆ ನದಿ ತೀರದಲ್ಲಿ ಬಲಿ ಬೀಳುತ್ತದೆ. ಅದರಂತೆ ಬೇಟೆ ಮುಂದುವರಿಯಿತು. ಇದು ಮೊದಲ ಹಂತಕ್ಕಿಂತ ತುಸು ಕಠಿಣವಾಗಿತ್ತು. ಏಕೆಂದರೆ ಬಹಳ ಸಿಕ್ಕುಸಿಕ್ಕಾದ, ಅಡ್ಡ ಕಟ್ಟಿದಂಥ ಪೊದೆಗಳು ನನ್ನ ದಾರಿಯಲ್ಲಿ ಎದುರಾದವು. ಅವುಗಳಡಿ ನುಸುಳುವುದಾಗಲಿ, ಒಳಗೆ ನುಗ್ಗುವುದಾಗಲೀ ಬಹಳ ಹುಚ್ಚು ಸಾಹಸವಾದೀತು. ನನಗೊಂದು ಬಡಿಗೆ ಮಾಡಿಕೊಟ್ಟಿದ್ದರಾದರೂ ಪೊದೆಗಳು ಸಂಕೀರ್ಣವಾಗಿ ಬೆಳೆದಿದ್ದುದರಿಂದ ಅಲ್ಲಿ ಮುಂದೆ ಸಾಗುವುದು ಕಷ್ಟವಾಯಿತು. ಅಂಥ ಕಡೆ ನಾನು ನೇರವಾಗಿ ಹೋಗದೆ ಅಂಥ ಪೊದೆಗಳನ್ನು ತಪ್ಪಿಸಿಕೊಂಡು ಸಾಗಿದೆ. ಆದರೆ ಕೂಡಲೇ ಬಿರುಮಳೆ ಆರಂಭವಾಯಿತು.
ಉಳಿದವರು ರೇನ್ ಕೋಟ್ ಧರಿಸಿದ್ದರು. ನನ್ನ ಬಳಿ ಕೊಡೆ ಇತ್ತಾದರೂ ಪೊದೆಗಳು ಎಷ್ಟು ಒತ್ತೊತ್ತಾಗಿದ್ದವು ಎಂದರೆ ಕೊಡೆ ಬಿಡಿಸುವುದೇ ಅಸಾಧ್ಯವಾಗಿತ್ತು. ಒಂದೊಮ್ಮೆ ಕೆಲವು ಕಡೆ ಬಿಡಿಸಲಾದರೂ ಕೊಡೆ ಹಿಡಿದು ಚಲಿಸುವುದು ಸಾಧ್ಯವಿರಲಿಲ್ಲ. ಇಂಥ ಸಂದರ್ಭಗಳಲ್ಲಿ ನಾವು ದಾರಿ ತಪ್ಪಬಹುದು.
ಇದೇ ಒಂದು ವೇಳೆ ರಾತ್ರಿಯಾಗಿದ್ದರೆ? ಖಂಡಿತ ಭಯವಾಗಿರುತ್ತಿತ್ತು. ಬಹುಶಃ ಬೇಟೆಗಾರರು ಪ್ರಾಣಿ ಎಂದು ಸಹಚರರಿಗೇ ಗುಂಡು ಹೊಡೆಯುವ ಪ್ರಸಂಗಗಳು ಇದೇ ರೀತಿ ಸೃಷ್ಟಿಯಾಗುತ್ತವೆಯೋ ಏನೋ ಎಂದು ಅಂದುಕೊಂಡೆ. ನಿಲ್ಲಲೇ ಬೇಡವೇ ಎಂಬ ಆಲೋಚನೆ ಶುರುವಾಯಿತು. ಏಕೆಂದರೆ ಮೊದಲ ಹಂತ ಮುಗಿದಾಗ ಸಣ್ಣ ಮಳೆ ಬಂದಿತ್ತು. ಆಗ ಎಲ್ಲರೂ ಮರದಡಿ ಕೊಡೆ ಹಿಡಿದು ನಿಂತಿದ್ದೆವು. ಈಗ ಒಂದು ವೇಳೆ ಎಲ್ಲರೂ ನಿಂತಿರಬಹುದೇ? ಅಥವಾ ನಾನು ಮಾತ್ರ ಇಲ್ಲಿ ಬಾಕಿಯಾಗಿ ಉಳಿದೆಲ್ಲರೂ ಗುರಿ ಮುಟ್ಟಿರಬಹುದೇ?-ಹೀಗೆ ಗೊಂದಲವಾಯಿತು. ಈ ಕಾಡಿನ ಪರಿಚಯವೂ ನನಗಿಲ್ಲ. ಏನು ಮಾಡಲಿ ಎಂದುಕೊಂಡು ಸ್ವಲ್ಪ ಹೊತ್ತು ಕೊಡೆ ಬಿಡಿಸಿ ನಿಂತುಬಿಟ್ಟೆ. ದಾರಿಯೂ ಕಠಿಣ ಇದೆ (ದಾರಿಯೇ ಇಲ್ಲ!) ಮಳೆಯೂ ನಿಲ್ಲುತ್ತಿಲ್ಲ. ಅಂಗಿಯ ಜೇಬಿನಲ್ಲಿದ್ದ ಮೊಬೈಲಲ್ಲಿ ಸಿಗ್ನಲ್ ಕೂಡ ಇರಲಿಲ್ಲ.
ಏನಾದರಾಗಲಿ, ನಾನು ಕಾಡೊಳಗೆ ಸಿಲುಕಿಕೊಂಡು ಬೇಟೆಗೆ ಅಡ್ಡಿಯಾಗುವುದು ಬೇಡ ಎಂದುಕೊಂಡು ಬಲ ದಿಕ್ಕಿಗೆ ಹೊರಳಿದಾಗ ಸಣ್ಣ ದಾರಿಯೊಂದು ಗುಡ್ಡದ ಮೇಲ್ಭಾಗದ ಕಡೆ ಸಾಗಿರುವುದು ಕಂಡಿತು. ಆ ಕಡಿದಾದ ಕಾಡಿನಲ್ಲಿ ಯಾವ ಕಾಲದಲ್ಲಿ ಬಳಕೆಯಾಗಿತ್ತೊ ಆ ಹಾದಿ. ಅದರಲ್ಲಿ ಸಾಗಿದೆ. ಅಲ್ಲಿ ಆಕಾಶ ಕಾಣಿಸುವ ಒಂದು ಸಣ್ಣ ತೆರೆದ ಜಾಗ ಸಿಕ್ಕಿತು. ಆದರೆ ಅಲ್ಲಿಂದ ಮತ್ತೆ ಸುತ್ತೆಲ್ಲ ಪೊದೆ. ಅಲ್ಲಿಯೇ ನಿಂತೆ. ಮಳೆ ನಿಂತಿರಲಿಲ್ಲ. ರುಯ್ಯನೆ ಬಂದು ಬಲವಾಗಿ ಕಚ್ಚಿ ರಕ್ತ ಹೀರುವ ನೊಣದಂಥದೊಂದು ಛತ್ರಿಯೊಳಗೆ ಬಂದು ಕಾಡತೊಡಗಿತು. ಅದನ್ನು ಹೊಡೆದು ಹಾಕಿದೆ. ಅಷ್ಟು ಹೊತ್ತಿಗೆ ಅಲ್ಲಿಗೆ ನಮ್ಮ ತಂಡದಲ್ಲಿದ್ದ ಎರಡು ನಾಯಿಗಳಲ್ಲಿ ಒಂದು ನಾಯಿ ಬಂತು. ಮತ್ತೆ ಬಂದ ದಿಕ್ಕಿನಲ್ಲಿ ಮರಳಿತು. ಮಳೆಯ ಅಬ್ಬರ ಕಡಿಮೆಯಾದ ಕೂಡಲೇ ಆ ದಿಕ್ಕಿನಲ್ಲಿ ಜನರ ಮಾತುಗಳು ಕೇಳಿ ಬರತೊಡಗಿದವು. ಅಲ್ಲಿಗೆ ಹೋದೆ. ನಮ್ಮ ತಂಡ ಅಲ್ಲೆ ನಿಂತಿತ್ತು. ಅವರಲ್ಲಿ ಕೆಲವರು ಅಲ್ಲಿ ಕಲ್ಲಣಬೆ ಕದಕುತ್ತಿದ್ದರು!
ಮತ್ತೆ ಅಲ್ಲಿಂದ ಕೆಳಮುಖವಾಗಿ ಸಾಗುವ ಸೂಚನೆ ದೊರೆಯಿತು. ಹಾಗೆ ಸಾಗಿದಾಗ ನದಿ ತೀರ ಸಮೀಪವಾಯಿತು. ಮಳೆಗೆ ನದಿ ಭೋರ್ಗರೆಯುತ್ತಿತ್ತು. ಹಂದಿ ಇಲ್ಲ ಎಂಬ ಸೂಚನೆ ದೊರೆಯಿತು. ಬೇಟೆ ನಿಲ್ಲಿಸಿ ಕೋವಿಯವರು, ಅನುಭವಸ್ಥರು ಮುಂದೆ ಸಾಗಿದ್ದರು. ನಾನು ಕೊನೆಯಲ್ಲಿ ಉಳಿದಿದ್ದೆ. ಮತ್ತೆ ಮೊದಲನೆ ಹಂತ ಕೊನೆಗೊಂಡ ಸ್ಥಳ ತಲುಪಿದೆವು. ಈ ಮಧ್ಯೆ ನಾಯಿಯೊಂದು ಕೋತಿ ಮರಿಯೊಂದನ್ನು ಗಾಯಗೊಳಿಸಿತ್ತು. ಹಂದಿ ಓಡಿಹೋಗಿದೆ. ಕಾಡುಕೋಳಿಗಳು ಕೂಗಿಕೊಂಡು ಓಡಿದ್ದು, ಕೋತಿಗಳು ಅರಚಿದ್ದು ಇವೆಲ್ಲ ಹಂದಿ ಓಡಿದಾಗ ಇರಬಹುದು ಎಂಬ ವಿಶ್ಲೇಷಣೆ ಬಂತು. ಮಧ್ಯಾಹ್ನ 2.30 ಆಗಿದ್ದರೂ ಮಳೆ, ಕಾಡಿನ ದಟ್ಟತೆ, ಮಳೆಯಿಂದಾಗಿ ಕತ್ತಲು ಆವರಿಸಿತ್ತು. ಮಳೆ ಇನ್ನಷ್ಟು ಬಿರುಸಾಯಿತು. ಮೈ ಒದ್ದೆ ಆಗಿತ್ತು. ನೆಲ ತೊಯ್ದು ಜಾರುತ್ತಿತ್ತು. ಹಸಿವು ಜೋರಾಗಿತ್ತು.
ಇದರ ನಡುವೆ, ನಾವು ನದಿಯನ್ನು ಸಮೀಪಿಸಿದ ವೇಳೆ “ಹಂದಿ ಇಲ್ಲ, ಮರಳಿ’ ಎಂಬ ಸೂಚನೆ ಬಂದು ನಾವು ತೆರಳಲನುವಾದ ಕೂಡಲೇ ನದಿಯ ದಡದ ಕಡೆಯಿಂದ “ಗೊರಂಕ್’ ಎಂಬ ಶಬ್ಧವೊಂದು ನನಗೆ ಕೇಳಿದಂತಾಗಿತ್ತು ನಿಜವೇ ಅಥವ ಭ್ರಮೆಯೇ? ಒಂದು ವೇಳೆ ನಿಜ ಆಗಿದ್ದರೆ ಅದು ಹಂದಿಯದ್ದೆ? ಅಥವಾ ನದಿಯ ನೀರಿನ ಅಬ್ಬರದ ಹರಿವು ಮತ್ತು ಬಂಡೆಯ ನಡುವಿನ ಘರ್ಷಣೆಯೇ? ಅಥವಾ ಹಂದಿ ಆ ಮೂಲೆಯಲ್ಲಿ ಅವಿತಿತ್ತೆ? ತಂಡದ ಸಾಲಿನ ಕೊನೆಯಲ್ಲಿದ್ದ ನನ್ನ ಮೇಲೆ ಹಂದಿ ದಾಳಿ ಇಟ್ಟಿದ್ದಿದ್ದರೆ? ಇತ್ಯಾದಿ ಆಲೋಚನೆ ನನ್ನ ತಲೆಯಲ್ಲಿ ಸುತ್ತುತ್ತಿತ್ತು!
ಹೇಗೂ ತಂಡ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಹಂದಿ ಇದ್ದರಂತೂ ಹೆಚ್ಚು ದಿನ ಬದುಕುವುದಿಲ್ಲ. ಕಾಡಿನ ಯಾವುದೇ ಮೂಲೆಯಲ್ಲೋ ಅಥವಾ ಗದ್ದೆ-ತೋಟಕ್ಕೆ ಹೊಕ್ಕಾಗಲೋ ಬಲಿ ಬೀಳುವುದು ಖಚಿತ ಎಂದುಕೊಂಡೆ. ಬೇಟೆ ಸಿಗುತ್ತದೋ ಇಲ್ಲವೋ ಮುಖ್ಯವಲ್ಲ. ಶಿಕಾರಿಯ ಅನುಭವ ಮಾತ್ರ ಅದ್ಭುತವಾದುದು. ಹಾಗಾಗಿ ಸದ್ಯಕ್ಕೆ, ‘ನಾನೂ ಶಿಕಾರಿಗೆ ಹೋಗಿದ್ದೆ’ ಎಂಬ ಒಂದು ಸಮಾಧಾನಕ್ಕೆ ಈಗ ಒಂದು ಊಟದ ಬೆಂಬಲ ಬೇಕಿತ್ತು. ಚಳಿಯೂ ಹಿಡಿದಿತ್ತು.
– ಸಂದೇಶ್ ಸಾಲ್ಯಾನ್