ಮೈನವಿರೇಳಿಸುತ್ತಿದ್ದ ಆ ದೇಶಪ್ರೇಮ! ಎಲ್ಲಿದೆ ಈಗ ಕಂಡು ಕಾಣದೇ ಮರೆಮಾಚಿರುವಾಗ

ಭಾರತವನ್ನು ನಾವು ಹಬ್ಬಗಳ ದೇಶವೆಂದು ಕರೆಯುವುದನ್ನು ಕೇಳಿದ್ದೇವೆ. ಆಗಸ್ಟ್ ತಿಂಗಳು ಅಂದಾಕ್ಷಣನೇ ಹಬ್ಬಗಳ ಸುರಿಮಳೆಯೇ ಆಗುತ್ತದೆ.

ನಾಗರ ಪಂಚಮಿ, ಶ್ರಾವಣ ಮಾಸ, ವರಮಾಹಾಲಕ್ಷ್ಮೀ ಇವೆಲ್ಲದರ ಮಧ್ಯೆ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆ ಹೌದು 15ನೇ ತಾರೀಖು ಬಂದ್ರೆ ಸಾಕು ಅವತ್ತು ಎಲ್ಲಿಲ್ಲದ ದೇಶ ಪ್ರೇಮ, ಆ ಬಿಳಿ ಶಾಲಾ ಸಮವಸ್ತ್ರದಲ್ಲಂತೂ ಅದೊಂದು ಗಾಂಭೀರ್ಯತೆ, ಆ ಹುಮಸ್ಸು, ಶಾಲಾ ಆವರಣವಂತೂ ಮದುವಣಗಿತ್ತಿಯಂತೆ ಅಲಂಕಾರಗೊಂಡು ನಾಚಿಕೆಯಿಂದ ನಗುತ್ತಿರುತ್ತಿತ್ತು, ಧ್ವಜಾರೋಹಣದಲ್ಲಿ ಅರಳುವ ಆ ಧ್ವಜದ ಮಧ್ಯೆ ಬೀಳುವ ಹೂವು ದಳಗಳು. ಅಬ್ಬಾ! ನಿಜ ಇದೆಲ್ಲಾ ನೆನೆದಾಗ ಕಣ್ಣಂಚಲ್ಲಿ ನೀರು ಬರುತ್ತದೆ.

ಹೇಗಿದ್ದವು ಆ ದಿನಗಳು ಅಂತ! ನಾನು ಚಿಕ್ಕವಳಿರುವಾಗ ರಾಷ್ಟ್ರ ಪ್ರೇಮ ಅಂದರೆ ಒಂದು ಸ್ವಾತಂತ್ರ್ಯ ದಿನಾಚರಣೆ ಇನ್ನೊಂದು ಗಣರಾಜ್ಯೋತ್ಸವ. ಆ ಎರಡು ಹಬ್ಬಗಳು ಬಂತೆಂದರೆ ಅದರ ಪರಿಯ ಬೇರೆ, ಭಾಷಣ, ದೇಶಭಕ್ತಿ ಗೀತೆಗಳು, ಕೇಸರಿ , ಬಿಳಿ , ಹಸಿರು ಬಣ್ಣದ ಬಟ್ಟೆಗಳು ಈ ತರಹದ್ದೇ, ಎಲ್ಲವೂ ದೇಶ ಪ್ರೇಮವನ್ನೇ ಬಿಂಬಿಸುವಂತಹದ್ದು ಕಾಣಸಿಗುತ್ತಿತ್ತು. ಈ ತಿಂಗಳು ಪ್ರಾರಂಭವಾಗುವುದು ಅಷ್ಟರಲ್ಲೇ ನೃತ್ಯಗಳು, ಹಾಡುಗಳು, ಭಾಷಣ ಅದಲ್ಲದೇ ಸ್ವಾತಂತ್ರ್ಯ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗುವ ಸ್ಪರ್ಧೆಗಳು ಹೀಗೆಯೇ ಅದರದ್ದೇ ಒಂದು ದೇಶ ಪ್ರೇಮದ ಲೋಕವೇ ಸೃಷ್ಟಿಯಾಗುತ್ತಿತ್ತು.

 

ಇನ್ನೂ ವೈಯಕ್ತಿಕವಾಗಿ ನಾನು ೧೫ ತಾರೀಖಿನ ಹಿಂದಿನ ದಿನ ಅಪ್ಪ ಕೈಯಲ್ಲಿ ಮದರಂಗಿಯಲ್ಲಿ ಹಾಕಿಸಿಕೊಂಡದ್ದು ಇದೆ. ಅಮ್ಮ ತೊಳೆದ ಬಟ್ಟೆಗಳನ್ನು ಅಪ್ಪ ಇಸ್ತ್ರೀ ಮಾಡಿ ಇಡುತ್ತಿದ್ದರು. ಬೆಳೆಗ್ಗೆ ಎದ್ದ ತಕ್ಷಣ ಹೊರಗೆ ಓಡಿ ಹೋಗಿ ಅಮ್ಮನ ಹಾಕುವ ರಂಗೋಲಿಯನ್ನು ನೋಡುವುದೇ ಒಂದು ಕುತೂಹಲ. ಅಮ್ಮ ನನ್ನನ್ನು ತಯಾರಿ ಮಾಡಿದರೆ ಅಪ್ಪ ಕುರ್ಚಿಯಲ್ಲಿ ಕೂರಿಸಿ ಕಾಲ್ಚೀಲ ಮತ್ತು ಬೂಟುಗಳನ್ನೂ ಹಾಕಿ ಎರಡು ಕೈಗಳಿಗೆ ಕೇಸರಿ, ಬಿಳಿ, ಹಸಿರು ಬಣ್ಣಗಳ ಬ್ಯಾಂಡ್ ಗಳನ್ನೂ ಹಾಕುತ್ತಿದ್ದರು. ಮತ್ತು ಎದೆ ಮೇಲೆ ಒಂದು ದೇಶ ಪ್ರೇಮದ ಸಂಕೇತವಾಗಿ ಒಂದು ಬ್ಯಾಚ್ ಹಾಕಿಕೊಂಡು, ಕೈಯಲ್ಲಿ ಧ್ವಜವನ್ನು ಹಿಡಿದುಕೊಂಡು ಹೊರಟರೇ ಎಲ್ಲಿಲ್ಲದ ಸಂಭ್ರಮ. ಇನ್ನೂ ರಸ್ತೆಯಲ್ಲಿ ಹೋಗುವಾಗ ಒಂದೊಂದು ಶಾಲೆಯು ಆಚರಿಸುವ ರೀತಿಯನ್ನು ನೋಡುವ ಕುತೂಹಲ, ಎಲ್ಲರ ಮನೆಯ ಮುಂದೆ ಹಾಕಿದ ಆ ದೇಶ ಪ್ರೇಮದ ರಂಗೋಲಿಗಳು, ಒಂದು ಕಡೆ ಬಾವುಟ, ಇನ್ನೊಂದು ಕಡೆ ಭಾರತ ನಕ್ಷೆ, ಮತ್ತೊಂದು ಕಡೆ ಧ್ವಜಾರೋಹಣ, ಇದೆಲ್ಲವನ್ನೂ ನೋಡಿ ಇನ್ನೂ ಶಾಲೆಗೆ ಹೋದಾಗ ಶಿಕ್ಷಕಿಯರೆಲ್ಲ ಸೇರಿ ಹಾಕುವ ರಂಗೋಲಿಯ ಚಂದ-ಅಂದವನ್ನು ನೋಡುವುದೇ ಒಂದು ಆಕರ್ಷಣೆ. ಇನ್ನೂ ಧ್ವಜಾರೋಹಣ ಸಮಯದಲ್ಲಿಶಿಸ್ತಿನಲ್ಲಿ ರಾಷ್ಟ್ರ ಗೀತೆಯನ್ನು ಹಾಡುವುದು ಹೆಮ್ಮೆ, ನಂತರ ಅಪ್ಪನ ಕಡೆಯಿಂದ ಬರೆಯಿಸಿಕೊಂಡ ಭಾಷಣ ರಾತ್ರಿ ಇಡೀ ಬಾಯಿಪಾಠ ಮಾಡಿದ್ದು ವೇದಿಕೆ ಮೇಲೆ ಹೋದಾಗ ಭಾಷಣ ಪ್ರಾರಂಭವಾಗುವುದು – ” ಮಾನ್ಯ ಅಧ್ಯಕ್ಷರೇ, ಅತಿಥಿಗಳೇ, ಶಿಕ್ಷಕರೇ ಮತ್ತು ಶಿಕ್ಷಕಿಯರೇ ಹಾಗೂ ಸಹೋದರ-ಸಹೋದರಿಯರೇ ಇಂದು ನಾವೆಲ್ಲಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂತಲೇ” ಎಲ್ಲರ ಭಾಷಣವೂ ಹೀಗೆಯೇ ಇರುತ್ತಿತ್ತು.

ಶಾಲಾ ಆವರಣದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಹಾಳೆಯ ಪಟ್ಟಿಗಳು, ಯಾವಾಗಲೂ ಗೋಡೆಯ ಮೇಲೆ ಇರುವ ಗಾಂಧೀ ತಾತನ ಭಾವಚಿತ್ರ ಇದೆಲ್ಲವನ್ನು ನೋಡುತ್ತಾ ಕಳೆದ ಎಷ್ಟೋ ಸ್ವಾತಂತ್ರ್ಯ ದಿನಾಚರಣೆಗಳ ನಂತರ ನಾವು ಈಗ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿದ್ದೇವೆ. ಈಗೆಲ್ಲಾ ನಾಳೆ ಸ್ವಾತಂತ್ರ್ಯ ದಿನ ಅಲ್ವಾ ? ಅನ್ನುವ ಹಾಗೆ , ಮತ್ತು ಬೆಳಿಗ್ಗೆ ಎದ್ದು ಮನೆಯಲ್ಲಿ ಕುಳಿತು ಕೆಂಪು ಕೋಟೆಯಲ್ಲಾಗುವ ಸ್ವಾತಂತ್ರ್ಯ ದಿನಾಚರಣೆಯನ್ನು ನೋಡಿದರೆ ಅಲ್ಲಿಗೆ ಮುಗಿಯಿತು. ನಾವು ಕಂಡಂತಹ ಆ ದೇಶ ಪ್ರೇಮದ ದಿನಗಳು ಈಗೆಲ್ಲಿವೆ. ಎಲ್ಲವೂ ಇನ್ಸ್ಟಾಗ್ರಾಂ ರಿಲ್ಸ್, ಯೂಟ್ಯೂಬ್ ವಿಡಿಯೋಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದೆ. ಒಟ್ಟಿನಲ್ಲಿ ಬೆಳೆಯುತ್ತಿರುವ ದೇಶ ಪ್ರೇಮ ದ್ವಿಗುಣವಾಗುತ್ತಿರಲಿ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

-ಪ್ರಿಯದರ್ಶಿನಿ ಆರ್.ಮುಜಗೊಂಡ