ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಅಭ್ಯರ್ಥಿ ಇಲ್ಲ ಎಂದು ಗಾಂಧಿ ಕುಟುಂಬವು ಮುಖ್ಯ ಚುನಾವಣಾ ಪ್ರಾಧಿಕಾರಿ ಮಧುಸೂದನ್ ಮಿಸ್ತ್ರಿ ಮೂಲಕ ಸ್ಪಷ್ಟಪಡಿಸಿದೆ. ಗಾಂಧಿ ಕುಟುಂಬವು ಈ ವಿಷಯದಲ್ಲಿ ತಟಸ್ಥವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಭಾನುವಾರ ಕೆಲವು ನಾಯಕರ ಮೇಲೆ ಒತ್ತಡದ ಸುಳಿವು ಇದೆ ಎನ್ನುತ್ತಾ “ಅಸಮವಾದ ಆಟದ ಮೈದಾನ” ದ ಸೂಚನೆಗಳಿವೆ ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ತರೂರ್, ಗಾಂಧಿಗಳು ತಟಸ್ಥತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ‘ಅಸಮ ಆಟದ ಮೈದಾನ’ವನ್ನು ಸೂಚಿಸುವ ಕೆಲವು ಅಂಶಗಳಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಮ್ಮುವಿನಲ್ಲಿ ಪಕ್ಷದ ನಾಯಕರನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಚುನಾವಣೆ ಪಕ್ಷದ ಆಂತರಿಕ ವಿಷಯವಾಗಿದೆ ಆದರೆ ನಿಜವಾದ ಹೋರಾಟ ಭಾರತೀಯ ಜನತಾ ಪಕ್ಷದ ವಿರುದ್ಧವಾಗಿದೆ. ಏಳು ದಶಕಗಳಲ್ಲಿ ಕಾಂಗ್ರೆಸ್ ಕಟ್ಟಿದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ನುಚ್ಚುನೂರು ಮಾಡಲಾಗಿದೆ ಮತ್ತು ಭಿನ್ನಾಭಿಪ್ರಾಯಗಳ ದನಿಯನ್ನು ದಮನಿಸಿ ದುರ್ಬಲಗೊಳಿಸಲಾಗಿದೆ. ನಮ್ಮ ನಿಜವಾದ ಹೋರಾಟ ರಾಜಕೀಯ, ಪ್ರಜಾಸತ್ತಾತ್ಮಕ ಮತ್ತು ಸಾಮಾಜಿಕ ವಾತಾವರಣವನ್ನು ಹಾಳು ಮಾಡುತ್ತಿರುವ ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಎಂದು ಹೇಳಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.