ಬಂಟಕಲ್ ಬಳಿ ಥಾರ್ ಕಾರು ಚರಂಡಿಗೆ ಉರುಳಿ: ನಾಲ್ವರಿಗೆ ಗಾಯ

ಉಡುಪಿ: ಮಹೀಂದ್ರಾ ಥಾರ್ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ಶಿರ್ವ–ಕಟಪಾಡಿ ರಾಜ್ಯ ಹೆದ್ದಾರಿಯ ಬಂಟಕಲ್ ಸಮೀಪದ ಬಿ.ಸಿ. ರಸ್ತೆ ಬಳಿ ನಡೆದಿದೆ.

ಗಾಯಾಳುಗಳನ್ನು ಚಾಲಕ ಶಿರ್ವ ನಿವಾಸಿ ಬಾಲಕೃಷ್ಣ (21), ಇಬ್ಬರು ಯುವತಿಯರು ಹಾಗೂ ಮತ್ತೋರ್ವ ಸಹ ಪ್ರಯಾಣಿಕ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ನಾಲ್ವರೂ ಗಾಯಗೊಂಡಿದ್ದು, ಅವರಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯರು ತಕ್ಷಣ ಗಾಯಾಳುಗಳನ್ನು ರಕ್ಷಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.

ಅಪಘಾತದ ಮಾಹಿತಿ ತಿಳಿದು ಶಿರ್ವ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.