ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಕ್ಷಣ ಸಮೀಪಿಸಿದೆ. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸರ್ಕಾರ ರಚನೆಯ ಹಕ್ಕು ಮಂಡಿಸಲು ಇಂದು ಚೆನ್ನೈನ ರಾಜಭವನಕ್ಕೆ ಆಗಮಿಸಿದೆ. ಚೊಚ್ಚಲ ವಿಧಾನಸಭಾ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದು ಸಂಚಲನ ಮೂಡಿಸಿದ್ದ ಟಿವಿಕೆಗೆ ಇದೀಗ ಮಿತ್ರಪಕ್ಷಗಳ ಬೆಂಬಲದೊಂದಿಗೆ ಒಟ್ಟು 121 ಶಾಸಕರ ಬಲ ದೊರೆತಿದ್ದು, ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ.
ಟಿವಿಕೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ 5 ಶಾಸಕರು, ಭಾರತೀಯ ಕಮ್ಯುನಿಸ್ಟ್ ಪಕ್ಷನ 2 ಶಾಸಕರು, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್)ನ 2 ಶಾಸಕರು, ವಿಡುತಲೈ ಚಿರುತ್ತೈಗಳ್ ಕಚ್ಚಿಯ 2 ಶಾಸಕರು ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ 2 ಶಾಸಕರು ಬೇಷರತ್ ಬೆಂಬಲ ಘೋಷಿಸಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಾದ 118 ಸಂಖ್ಯೆಯನ್ನು ಮೈತ್ರಿಕೂಟ ಸುಲಭವಾಗಿ ದಾಟಿರುವುದರಿಂದ ವಿಜಯ್ ಮುಖ್ಯಮಂತ್ರಿಯಾಗುವ ಹಾದಿ ಸ್ಪಷ್ಟವಾಗಿದೆ.
1967ರ ನಂತರ ಮೊದಲ ಬಾರಿಗೆ ದ್ರಾವಿಡ ಮುನ್ನೇತ್ರ ಕಳಗಂ ಹಾಗೂ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಮೈತ್ರಿಗಳ ಹೊರಗಿನ ಪಕ್ಷವೊಂದು ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಭೇಟಿಗೆ ಸಮಯ ನೀಡಿದ್ದು, ಶಾಸಕರ ಬೆಂಬಲ ಪತ್ರಗಳೊಂದಿಗೆ ವಿಜಯ್ ರಾಜಭವನಕ್ಕೆ ತೆರಳಿದ್ದಾರೆ. ಶೀಘ್ರದಲ್ಲೇ ಪ್ರಮಾಣ ವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ರಾಜಕೀಯ ಬಿಕ್ಕಟ್ಟಿನ ನಡುವೆ ಕೊನೇ ಕ್ಷಣದಲ್ಲಿ ಬೆಂಬಲ ಘೋಷಿಸಿದ ವಿಸಿಕೆ ಪಕ್ಷ ಮಹತ್ವದ ಪಾತ್ರವಹಿಸಿದೆ. ವಿಸಿಕೆ ಅಧ್ಯಕ್ಷ ತೋಳ್ ತಿರುಮಾವಳವನ್ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವುದನ್ನು ತಪ್ಪಿಸಲು ಹಾಗೂ ಟಿವಿಕೆ ಸರ್ಕಾರ ರಚನೆಗೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಬೆಂಬಲ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಂಬಲ ಕೇವಲ ಸರ್ಕಾರ ರಚನೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಷರತ್ತುಗಳನ್ನು ಒಳಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಬೆಳವಣಿಗೆಯೊಂದಿಗೆ ತಮಿಳುನಾಡಿನಲ್ಲಿ “ವಿಜಯ್ ಯುಗ” ಆರಂಭವಾಗುತ್ತಿರುವುದಾಗಿ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.

















