ವಿದ್ಯಾರ್ಥಿಗಳು ಬರೀ ವಿದ್ಯಾವಂತರಾದರೆ ಸಾಲದು, ಜ್ಞಾನವಂತರೂ ಆಗಬೇಕು – ಆಲ್ವಿನ್ ಆಂದ್ರಾದೆ

ಉದ್ಯಾವರ : ಓದುವುದು ಕೇವಲ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರದೇ ಇತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿಸಿದರೆ, ಇತರ ಪುಸ್ತಕಗಳು ಜ್ಞಾನವಂತರನ್ನಾಗಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾವಂತರಾಗುವ ಜೊತೆಗೆ ಜ್ಞಾನವಂತರೂ ಆಗಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ. ಪಠ್ಯ ಪುಸ್ತಕದ ಜೊತೆಗೆ ಇತರ ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಸಾಧ್ಯ ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಲ್ವಿನ್ ಆಂದ್ರಾದೆ ಹೇಳಿದರು.

ಭಾನುವಾರದಂದು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ, ಯು.ಎಫ್.ಸಿ ಪುಸ್ತಕ ಭಂಡಾರದಿಂದ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಗುಣ ಮರೆಯಾಗುತ್ತಿದೆ, ನಾವು ಒಂದು ವಿಷಯದ ಬಗ್ಗೆ ಪ್ರಶ್ನಿಸದಿದ್ದರೆ ಆ ವಿಷಯದಲ್ಲಿ ಪರಿಣತಿಯನ್ನು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಕರಾಗಲಿ, ಹೆತ್ತವರಾಗಲಿ ಯಾವುದೇ ವಿಷಯದ ಬಗ್ಗೆ ಹೇಳಿದಾಗ ಅದರ ಎಲ್ಲಾ ಆಯಾಮಗಳನ್ನು ತಿಳಿದು ಕೊಂಡು ಮತ್ತೆ ಒಪ್ಪಿಕೊಳ್ಳಬೇಕು. ಇಂತಹ ಅಭ್ಯಾಸ ಬೆಳೆಯ ಬೇಕಾದರೆ ಪುಸ್ತಕ ಓದಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಸಂಸ್ಥೆಯು ವಿದ್ಯಾ ಕ್ಷೇತ್ರದಲ್ಲಿ ನಿರಂತರವಾಗಿ ತನ್ನ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದೆ. ಇಂದು ಪುಸ್ತಕ ಭಂಡಾರದಿಂದ ಪುಸ್ತಕವನ್ನು ಪಡೆದ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದು ಕೊಂಡು ಜೀವನದಲ್ಲಿ ಯಶಸ್ಸುಗಳಿಸಬೇಕು. ಅದರೊಂದಿಗೆ ಪುಸ್ತಕಗಳನ್ನು ಪ್ರೀತಿಸಬೇಕು. ಆ ಪುಸ್ತಕಗಳಿಗಾಗಿ ಮುಂದಿನ ವರ್ಷದ ವಿದ್ಯಾರ್ಥಿಗಳು ಕಾಯುತ್ತಿರುತ್ತಾರೆ ತಮ್ಮ ಕಲಿಕೆ ಮುಗಿದ ಕೂಡಲೆ ಬುಕ್ ಬ್ಯಾಂಕಿಗೆ ಪುಸ್ತಕವನ್ನು ಹಿಂತಿರುಗಿಸಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಶರತ್ ಕುಮಾರ್ ಪಠ್ಯ ಪುಸ್ತಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿ, ಆರ್ಥಿಕ ಕಾರಣದಿಂದ ಉನ್ನತ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಓರ್ವ ವಿದ್ಯಾರ್ಥಿ ತನ್ನನ್ನು ಸಂಪರ್ಕಿಸಿದಲ್ಲಿ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಲು ಬದ್ದನಾಗಿರುವುದಾಗಿ ತಿಳಿಸಿದರು.

ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಸುಮಾರು 150 ವಿದ್ಯಾರ್ಥಿಗಳಿಗೆ ಬುಕ್ ಬ್ಯಾಂಕ್ ನಿಂದ  ಉಚಿತವಾಗಿ ಪುಸ್ತಕ ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ರಿಯಾಝ್ ಪಳ್ಳಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು.