ನವದೆಹಲಿ: ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಭಾರತದಲ್ಲಿ ಸ್ಥಳೀಯವಾಗಿ ಕಾರ್ಖಾನೆಯನ್ನು ಸ್ಥಾಪಿಸಲು ಭಾರತ ಸರ್ಕಾರದೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ. ಈ ಕಾರ್ಯತಂತ್ರವು ಭಾರತದಲ್ಲಿ EV ಕಾರುಗಳನ್ನು ತಯಾರಿಸುವ ಮತ್ತು ಅವುಗಳನ್ನು ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ನೀಡುವ ಗುರಿಯನ್ನು ಹೊಂದಿದೆ.
ಸರ್ಕಾರಿ ಮೂಲಗಳ ಪ್ರಕಾರ, ಟೆಸ್ಲಾ ವಾರ್ಷಿಕವಾಗಿ 500,000 EV ಗಳನ್ನು ಉತ್ಪಾದಿಸಲು ಯೋಜಿಸಿದ್ದು, ಆರಂಭಿಕ ಬೆಲೆಗಳು 20 ಲಕ್ಷದಿಂದ ಪ್ರಾರಂಭವಾಗುತ್ತವೆ ಎಂದು ಟಿಒಐ ವರದಿ ಮಾಡಿದೆ.
ಒಂದೊಮ್ಮೆ ಟೆಸ್ಲಾ ಭಾರತದಲ್ಲಿ ಸ್ಥಳೀಯ ಕಾರ್ಖಾನೆಯನ್ನು ತೆರೆಯುವಲ್ಲಿ ಸಫಲರಾದರೆ ಈ ನಡೆಯು ಭಾರತದ ಉದಯೋನ್ಮುಖ EV ಮಾರುಕಟ್ಟೆಗೆ ಬಲ ನೀಡಲಿದೆ. ಮೇ ತಿಂಗಳಲ್ಲಿ, ಟೆಸ್ಲಾ ಭಾರತದಲ್ಲಿ ಸ್ಥಳೀಯ ಕಾರ್ಖಾನೆಯನ್ನು ನಿರ್ಮಿಸಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ ಮತ್ತು ಮಾಧ್ಯಮ ವರದಿ ಪ್ರಕಾರ, ಕಂಪನಿಯು ಚೀನಾದಲ್ಲಿನ ತನ್ನ ಕಾರ್ಯಾಚರಣೆಗಳಂತೆಯೇ ಸೌಲಭ್ಯವನ್ನು ರಫ್ತು ಮೂಲವಾಗಿ ಬಳಸಿಕೊಳ್ಳಲು ಉದ್ದೇಶಿಸಿದೆ.
ವರದಿಯಲ್ಲಿ ಉಲ್ಲೇಖಿಸಲಾದ ಮೂಲಗಳು ಟೆಸ್ಲಾದ ಯೋಜನೆಯನ್ನು ಮಹತ್ವಾಕಾಂಕ್ಷೆಯ ಯೋಜನೆ ಎಂದು ವಿವರಿಸಿದೆ ಮತ್ತು ಸ್ಥಳೀಯ ಉತ್ಪಾದನೆ ಮತ್ತು ರಫ್ತುಗಳ ಒಳಗೊಳ್ಳುವಿಕೆಯನ್ನು ಪರಿಗಣಿಸಿ ಧನಾತ್ಮಕ ಫಲಿತಾಂಶಗಳಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಸ್ಥಳೀಯ ಉತ್ಪಾದನಾ ನೆಲೆಯ ಸ್ಥಾಪನೆಯು ಟೆಸ್ಲಾ ಮತ್ತು ಭಾರತಕ್ಕೆ ಪರಸ್ಪರ ಪ್ರಯೋಜನಕಾರಿಯಾಗಿದೆ. ಟೆಸ್ಲಾ ಕಾರುಗಳು ಭಾರತದಲ್ಲಿ ಉತ್ಪಾದನೆಯಾದಲ್ಲಿ ಭಾರತೀಯ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಇವಿ ಕಾರುಗಳು ದೊರೆಯಲಿವೆ. ಭಾರತದಲ್ಲಿ ಟೆಸ್ಲಾ ಕಾರುಗಳು ತಯಾರಾದಲ್ಲಿ ವಿಶ್ವದ ಉತ್ಪಾದನಾ ಹಬ್ ಎನ್ನುವ ಗರಿ ಭಾರತದ ಪಾಲಿಗೆ ವರವಾಗಲಿದೆ.
ಈ ಹಿಂದೆಯೂ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಉದ್ದೇಶವನ್ನು ವ್ಯಕ್ತಪಡಿಸಿತ್ತು ಆದರೆ ಹೆಚ್ಚಿನ ತೆರಿಗೆ ದರಗಳ ಕಾರಣದಿಂದಾಗಿ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು. ತನ್ನ ಕಾರುಗಳಿಗೆ ಅಗಾಧ ಮಾರುಕಟ್ಟೆಯ ಅವಕಾಶ ನೀಡುವ ಭಾರತದಂತಹ ದೇಶದಲ್ಲಿ ಕಾರ್ಖಾನೆಯನ್ನು ತೆರೆಯುವುದು ಟೆಸ್ಲಾದ ಬೆಳವಣಿಗೆಯಲ್ಲಿ ವೃದ್ದಿಯನ್ನು ದಾಖಲಿಸಲು ಸಹಾಯ ಮಾಡಲಿದೆ.