ನವದೆಹಲಿ: ಅಮೇರಿಕಾದ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಅತ್ಯಂತ ದೈತ್ಯ ಕಂಪೆನಿಯಾಗಿರುವ ಟೆಸ್ಲಾ ಕಂಪೆನಿ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಭರ್ಜರಿ ತಯಾರಿ ನಡೆಸಿದ್ದು ಭಾರತದ ರಸ್ತೆಗಳಲ್ಲಿ ತನ್ನ ಇವಿ ಕಾರುಗಳನ್ನು ತರಲು ಉತ್ಸುಕಗೊಂಡಿದೆ. ಅದಕ್ಕೋಸ್ಕರ ಈಗಾಗಲೇ ಭಾರತದಲ್ಲಿ ನೇಮಿಕಾತಿಯನ್ನು ಕಂಪೆನಿ ಚುರುಕುಗೊಳಿಸಿದ್ದು ಲಿಂಕ್ಡ್‌ಇನ್ ಮತ್ತು ಟೆಸ್ಲಾದ ವೆಬ್‌ಸೈಟ್‌ನಲ್ಲಿನ ಉದ್ಯೋಗ ಜಾಹೀರಾತು ಪ್ರಕಾರ, ಕಂಪನಿಯು ಭಾರತದಲ್ಲಿ ಕನಿಷ್ಠ 13 ಬಗೆಯ ವಿವಿಧ ಉದ್ಯೋಗಾವಕಾಶಗಳನ್ನು ಪೋಸ್ಟ್ ಮಾಡಿದೆ.
ಸಿಇಒ ಎಲೋನ್ ಮಸ್ಕ್ ಭಾರತಕ್ಕೆ ಟೆಸ್ಲಾ ಕಂಪೆನಿಯ ಎಂಟ್ರಿ ಕುರಿತು ಇತ್ತೀಚೆಗಷ್ಟೇ ಹಿಂಟ್ ನೀಡಿದ್ದರು. ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುವ ದೃಷ್ಟಿಯಿಂದ ಮುಂಬೈ ಮತ್ತು ದೆಹಲಿಯನ್ನು ಕಂಪೆನಿ ಕೇಂದ್ರಿಕರಿಸಿದೆ. ಇದಕ್ಕಾಗಿ ಸೇವಾ ತಂತ್ರಜ್ಞರು ಸೇರಿದಂತೆ ವಿವಿಧ ಹುದ್ದೆಗಳನ್ನು ಮೊದಲು ಭರ್ತಿ ಮಾಡಿಕೊಳ್ಳುತ್ತಿದೆ. ಭಾರತ-ಅಮೇರಿಕಾ ನಡುವೆ ವಿವಿಧ ವ್ಯಾಪಾರ ನೀತಿಗಳು ಸುಗಮಗೊಂಡಿರುದರಿಂದ ಟೆಸ್ಲಾ ಕಂಪೆನಿ ಭಾರತದಲ್ಲಿ ತನ್ನ ಇವಿ ಕಾರುಗಳನ್ನು ತರಲು ತಯಾರಿ ನಡೆಸಿದೆ ಎನ್ನಲಾಗಿದೆ.


















