2006ರ ವಾರಣಾಸಿ ಸಂಕಟ ಮೋಚನ ಮಂದಿರ ಮತ್ತು ರೈಲ್ವೇ ಛಾವಣಿ ಸರಣಿ ಸ್ಫೋಟ ಪ್ರಕರಣದ ಆರೋಪಿಗೆ ಮರಣದಂಡನೆ ಶಿಕ್ಷೆ

ಉತ್ತರ ಪ್ರದೇಶ: 2006ರ ವಾರಣಾಸಿ ಸರಣಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಭಯೋತ್ಪಾದಕ ವಲಿಯುಲ್ಲಾಗೆ ಗಾಜಿಯಾಬಾದ್ ನ್ಯಾಯಾಲಯವು ಶನಿವಾರ ಮರಣದಂಡನೆ ವಿಧಿಸಿದೆ.

ಮಾರ್ಚ್ 7, 2006 ರಂದು, ಉತ್ತರ ಪ್ರದೇಶದ ವಾರಣಾಸಿಯ ಸಂಕಟ ಮೋಚನ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಸರಣಿ ಸ್ಫೋಟಗಳು ಸಂಭವಿಸಿ ಕನಿಷ್ಠ 20 ಜನರನ್ನು ಬಲಿಯಾಗಿದ್ದರು ಮತ್ತು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದೇ ದಿನ ಸಂಜೆ ದಶಾಶ್ವಮೇಧ ಘಾಟ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದವು.

ಘಟನೆ ನಡೆದ ತಿಂಗಳ ಬಳಿಕ, ವಾರಣಾಸಿ ಪೊಲೀಸರು ವಾರಣಾಸಿಯಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ವಲಿಯುಲ್ಲಾ ಖಾನ್ ನನ್ನು ಬಂಧಿಸಿದ್ದರು. ಖಾನ್ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್-ಜೆಹಾದ್ ಅಲ್-ಇಸ್ಲಾಮಿಯೊಂದಿಗೆ ನಂಟು ಹೊಂದಿದ್ದು, ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ.ವಾರಣಾಸಿಯ ವಕೀಲರು ಆತನ ಪ್ರಕರಣವನ್ನು ಸ್ವೀಕರಿಸಲು ನಿರಾಕರಿಸಿದ ನಂತರ, ಅಲಹಾಬಾದ್ ಹೈಕೋರ್ಟ್ ಅದನ್ನು ಗಾಜಿಯಾಬಾದ್‌ನ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ಐಪಿಸಿ ಸೆಕ್ಷನ್‌ಗಳಾದ ಕೊಲೆ, ಕೊಲೆ ಯತ್ನ ಮತ್ತು ವಿರೂಪಗೊಳಿಸುವಿಕೆ ಮತ್ತು ಸ್ಫೋಟಕಗಳ ಕಾಯ್ದೆಯಡಿ ದಾಖಲಿಸಲಾದ ಎರಡು ಪ್ರಕರಣಗಳಲ್ಲಿ ನ್ಯಾಯಾಲಯವು ಶನಿವಾರ ಅವರನ್ನು ದೋಷಿ ಎಂದು ಪರಿಗಣಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೂರನೇ ಪ್ರಕರಣದಲ್ಲಿ ಆತನನ್ನು ಖುಲಾಸೆಗೊಳಿಸಲಾಗಿತ್ತು. ಮೂರೂ ಪ್ರಕರಣಗಳಲ್ಲಿ 121 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಗಾಜಿಯಾಬಾದ್ ಜಿಲ್ಲಾ ನ್ಯಾಯಾಲಯ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.