ಎರಡು ಬಸ್​ಗಳ ನಡುವೆ ಭೀಕರ ಅಪಘಾತ: 12 ಪ್ರಯಾಣಿಕರ ಸಾವು, ಹಲವರಿಗೆ ಗಂಭೀರ ಗಾಯ, ಪ್ರಧಾನಿಯಿಂದ ಪರಿಹಾರ ಘೋಷಿಣೆ

ಗಂಜಾಂ​ (ಒಡಿಶಾ): ಒಡಿಶಾದ ಗಂಜಾಂನಲ್ಲಿ ಭಾನುವಾರ ತಡರಾತ್ರಿ ಒಎಸ್‌ಆರ್‌ಟಿಸಿ ಬಸ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 10 ಜನ ಪ್ರಯಾಣಿಕರು ಸಾವನ್ನಪ್ಪಿದ್ದರು.
6 ಜನ ಗಂಭೀರವಾಗಿ ಗಾಯಗೊಂಡಿದ್ದರು. ಅದರಲ್ಲಿ ಮತ್ತೆ ಇಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಗಂಜಾಂ ಜಿಲ್ಲೆಯ ದಿಗ್ಪಹಂಡಿಯ ಡೆಂಗೋಸ್ಟಾ ಪ್ರದೇಶದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಬಸ್​ಗಳ ನಡುವೆ ಅಪಘಾತ ಸಂಭವಿಸಿ 12 ಜನ ಸಾವನ್ನಪ್ಪಿರುವ ಘಟನೆ ಒಡಿಶಾ ರಾಜ್ಯದ ಗಂಜಾಮ್​ನಲ್ಲಿ ನಡದಿದೆ.

ಮೃತರನ್ನು ರಮೇಶ್ ಪ್ರಧಾನ್ (62), ಸೀತಾರಾಮ್ ಪ್ರಧಾನ್ (60), ಸಂಜಯ್ ಮೇದಿನ್ ರೇ (50), ತ್ರಿಪತಿ ಪ್ರಧಾನ್, ಆಯುಷ್, ಸಂಗೀತಾ ಡಾಕುವಾ (25), ಸುಗ್ಯಾನಿ (27), ಸಿಬಾನಿ ಪ್ರಧಾನ್ (27), ಲಿತು ನಾಯಕ್ (40), ದೆಬನ್ಸು ಪ್ರಧಾನ್ (2 ವರ್ಷ), ಅಲೋಕ್ ಪ್ರಧಾನ್ (14), ಸುವೆಂದು ಪ್ರಧಾನ್ (32) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಗಂಜಾಂ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ.

ರಾಯಗಢ ಜಿಲ್ಲೆಯ ಗುಡಾರಿ ಪ್ರದೇಶದಿಂದ ಭುವನೇಶ್ವರಕ್ಕೆ ತೆರಳುತ್ತಿದ್ದ ಒಡಿಶಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (OSRTC) ಬಸ್ ಹಾಗೂ ಬೆರ್ಹಾಮ್‌ಪುರ ಪ್ರದೇಶದ ಖಂಡೇಲಿ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿದ್ದ ಖಾಸಗಿ ಬಸ್​ ಮುಖಾಮುಖಿ ಡಿಕ್ಕಿ ಹೊಡೆದಿವೆ. ಗಾಯಾಳುಗಳನ್ನು ಸ್ಥಳೀಯ ಬ್ರಹ್ಮಪುರದ ಎಂಕೆಸಿಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲ ಖಾಸಗಿ ಬಸ್​ನ ಪ್ರಯಾಣಿಕರಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಂಜಾಂ ಜಿಲ್ಲಾಧಿಕಾರಿ ದಿಬ್ಯಜ್ಯೋತ್ ಪರಿದಾ, ಬ್ರಹ್ಮಪುರ ಎಸ್ಪಿ ಡಾ ಶ್ರವಣ್​ ವಿವೇಕ್ ಎಂ ಮತ್ತು ಬ್ರಹ್ಮಪುರ ಉಪಜಿಲ್ಲಾಧಿಕಾರಿ ಅಶುತೋಷ್ ಕುಲಕರ್ಣಿ ಅವರು ಬ್ರಹ್ಮಪುರ ಎಂಕೆಸಿಜಿ ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಿ ಗಾಯಾಳುಗಳ ಚಿಕಿತ್ಸೆ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ವಿಚಾರಿಸಿದರು.

ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಪ್ರಧಾನಿ: ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು ಮೃತರ ಕಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳು ಮತ್ತು ಮೃತರ ಕುಟಂಬಗಳಿಗೆ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. “ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಸಂಭವಿಸಿರುವ ಬಸ್ ಅಪಘಾತದಿಂದ ಆಘಾತವಾಗಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಗಾಯಗೊಂಡವರಿಗೆ 50 ಸಾವಿರ ರೂ”. ನೀಡುವುದಾಗಿ ಅವರು ಟ್ವೀಟ್​ ಮೂಲಕ ಘೋಷಿಸಿದ್ದಾರೆ.
ಈ ಬಗ್ಗೆ ಬ್ರಹ್ಮಪುರದ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರವಣ್ ವಿವೇಕ್ ಎಂ ಮಾತನಾಡಿದ್ದಾರೆ. ”ತಡರಾತ್ರಿ 1 ಗಂಟೆ ಸಮಯದಲ್ಲಿ ದಿಗ್ಪಹಂಡಿಯ ಗ್ರಾಮದ ಡೆಂಗೋಸ್ಟಾ ಎಂಬಲ್ಲಿ ಒಎಸ್‌ಆರ್‌ಟಿಸಿ ಬಸ್ ಮತ್ತು ಬೆರ್ಹಾಮ್‌ಪುರ ಪ್ರದೇಶದ ಖಂಡೇಲಿ ಗ್ರಾಮದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂದಿರುಗಿದ್ದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಮೃತಪಟ್ಟ 10 ಮಂದಿ ಖಾಸಗಿ ಬಸ್‌ನಲ್ಲಿದ್ದವರು. ಅಲ್ಲದೇ ಈ ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಓರ್ವ ಬಸ್ ಚಾಲಕನಿಗೂ ಗಾಯವಾಗಿದೆ. ಮತ್ತೊಬ್ಬ ಬಸ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಬ್ರಹ್ಮಪುರದ ಎಂಕೆಸಿಜೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಶ್ರವಣ್​ ವಿವೇಕ್ ತಿಳಿಸಿದ್ದಾರೆ. ಇನ್ನು ಒಡಿಶಾ ಸರ್ಕಾರವು ಗಂಜಾಂನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ತಲಾ ರೂ 30,000 ಪರಿಹಾರ ಘೋಷಿಸಿದೆ.