ಕುಂದಾಪುರ: ಇಂದಿನ ಕಾಲಘಟ್ಟದಲ್ಲಿ ಡೇರೆ ಮೇಳಗಳ ಪೌರಾಣಿಕ ಕಥಾ ಹಂದರ ಪ್ರದರ್ಶನಗೊಳ್ಳುವುದೇ ಅಪರೂಪವಾಗಿರುವಾಗ ,ತೆಂಕು-ಬಡಗು ಎರಡು ಮೇಳಗಳ ಗಜಗಟ್ಟಿಕಲಾವಿದರು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿ ಹಳೆಯ ಪ್ರಸಂಗವೊಂದಕ್ಕೆ ಹೆಜ್ಜೆ ಹಾಕಿ, ಮಾತಿನ ಮಂಟಪ ಕಟ್ಟಿದರೆ ಹೇಗಾಗಬಹುದು.ಬಹುಷಃ ಪೌರಾಣಿಕ ಪ್ರಿಯರ ಪಾಲಿಗೆ ಅದೊಂದು ಹಬ್ಬವಾಗಬಹುದು.ಅಂತಹ ಒಂದು ಕೂಡಾಟದ ಯಕ್ಷ ಜಾತ್ರೆಗೆ ಡಿಸೆಂಬರ್ 29ರಂದು ಶನಿವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ಸಾಕ್ಷಿಯಾಗಲಿದೆ. ತೆಂಕಿನ ಗತ್ತು- ಬಡಗಿನ ಗೈರತ್ತುಗಳು ಯಕ್ಷ ಕಾಶಿಯಲ್ಲಿ ಅಂದು ನಡೆಯಲಿದೆ .
ಸುಂದರ ಪರಿಕಲ್ಪನೆಗಳ ಯಕ್ಷಸಂಘಟಕ ವೈ.ಕು.ಸುಂದರ್ ಸಂಯೋಜನೆಯಲ್ಲಿ ಸಂಘಟಿತವಾಗುವ ಈ ಕೂಡಾಟದಲ್ಲಿ ‘ಕಂಸವಧೆ -ಕರ್ಣಾರ್ಜುನ-ಕೃಷ್ಣಾರ್ಜುನ’ ಪ್ರದರ್ಶನಗೊಳ್ಳಲಿದೆ. ಹಿಲ್ಲೂರು , ಬಾಳ್ಕಲ್, ಪಲ್ಲವನ ಜೊತೆಗೆ ಅತಿಥಿ ಕಲಾವಿದರು, ಮೇರು ಕಂಠದ ಎರುಶ್ರುತಿಯ ಭಾಗವತ ಹೊಸಂಗಡಿ ರವೀಂದ್ರ ಶೆಟ್ಟರ ಗಾನ ಸಾರಥ್ಯ ಮೇಲೈಸಲಿದೆ.
ಪ್ರದರ್ಶನದ ಮತ್ತೊಂದು ವಿಶೇಷತೆವೆಂದರೆ ಯಕ್ಷಲೋಕದಲ್ಲಿ ಇದುವರೆಗ ನಾಯಕನ ಪಾತ್ರಗಳಿಂದಲೇ ಮಿಂಚಿದ ಚಿರಯುವಕ ಬಳ್ಕೂರು ಕೃಷ್ಣಯಾಜಿಯವರು ಕಂಸವಧೆಯ ಕಂಸನಾದರೆ, ಚಿಟ್ಟಾಣಿ ಕುಟುಂಬದ ಕುಡಿ, ಭರವಸೆಯ ಯುವಪ್ರತಿಭೆ ಕಾರ್ತಿಕ್ ಚಿಟ್ಟಾಣಿ ಕೃಷ್ಣನಾಗಿ ಮತ್ತು ಬೇರೋಳ್ಳಿ ಬಲರಾಮನಾಗಿ ಪಾತ್ರ ನಿರ್ವಹಿಸಲಿದ್ದಾರೆ .ಅದ್ಬುತವಾದ ಮಾತುಗಾರಿಕೆಯ ಮೂಲಕ ಪೌರಾಣಿಕ ಪಾತ್ರವನ್ನೇ ನಮ್ಮ ಮುಂದೆ ತಂದು ನಿಲ್ಲಿಸುವ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ಕರ್ಣನಾಗಿಲಿದ್ದು, ಕಣ್ಣಲ್ಲಿ ನೀರಿಳಿಸುವ ಕರ್ಣಾವಸಾನದ ಭಾವನಾತ್ಮಕ ಪಾತ್ರ , ಜತೆಗೆ ವಿಧ್ಯಾದರ್ ರಾವ್ ಶಲ್ಯ , ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಕೃಷ್ಣ ,ಉಪ್ಪುಂದ ನಾಗೇಂದ್ರ ಗಾಣಿಗ ಅರ್ಜುನ ಈ ಪ್ರಸಂಗಕ್ಕೆ ಜೀವ ತುಂಬಲಿದ್ದಾರೆ .
ಕೊನೆಯಲ್ಲಿ ಕರ್ಣಾಜುನದಲ್ಲಿ ನಿಲ್ಕೋಡು ಶಂಕರ ಹೆಗಡೆ ಅರ್ಜುನ , ಹೆನ್ನಾಬೈಲ್ ವಿಶ್ವನಾಥ್ ಕೃಷ್ಣ , ಹಳ್ಳಾಡಿ ಜಯರಾಮ ಶೆಟ್ಟಿ ಧಾರುಕ ಅದ್ಬುತವಾಗಿ ಮೂಡಿಬರಲಿದೆ .
ಪೌರಾಣಿಕ ಪ್ರಸಂಗ ಉಳಿಯಬೇಕು.ಸಂಪ್ರದಾಯಿಕ ಯಕ್ಷಗಾನ ಬೆಳೆಯಬೇಕು ಎಂದು ಕೇವಲ ಬೊಬ್ಬೆ ಹೊಡೆದಾರೆ ಸಾಕಾಗದು ಇಂತಹ ಪ್ರದರ್ಶನಗಳನ್ನು ಆಯೋಜಿಸಿದಾಗ ನೋಡಿ ಬೆನ್ನುತಟ್ಟಿದರೆ ಮಾತ್ರ ಪೌರಾಣಿಕ ಅಖ್ಯಾನ ಉಳಿಯಲು ಸಾಧ್ಯ.