ಬೆಂಗಳೂರು: ಆಸ್ಪತ್ರೆಗಳ ಬಿಲ್ನಲ್ಲಿ ಔಷಧಿಗಳ ದರ ಹಾಗೂ ಖರೀದಿ ವೆಚ್ಚದ ವಿವರಗಳನ್ನು ನಮೂದಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ನೀಡಿದ್ದ ಆದೇಶಕ್ಕೆ ಕರ್ನಾಟಕ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಖಾಸಗಿ ಆಸ್ಪತ್ರೆಗಳ ಒಕ್ಕೂಟದೊಂದಿಗೆ ಆರೋಗ್ಯ ಸಚಿವರು ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸರ್ಕಾರ ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದಿದೆಯೇ ಎಂಬ ಪ್ರಶ್ನೆ ಮೂಡಿದೆ.
ಅಕ್ಟೋಬರ್ 1ರಂದು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಈ ಕುರಿತು ಆದೇಶ ಹೊರಡಿಸಿತ್ತು. ನವೆಂಬರ್ 1ರಿಂದ ಆದೇಶ ಜಾರಿಗೆ ಬರಬೇಕಿತ್ತು. ಆದರೆ, ಖಾಸಗಿ ಆಸ್ಪತ್ರೆಗಳ ಆಕ್ಷೇಪದ ಹಿನ್ನೆಲೆಯಲ್ಲಿ ಸರ್ಕಾರ ಸದ್ಯಕ್ಕೆ ಆದೇಶವನ್ನು ತಡೆಹಿಡಿದಿದೆ. ಈ ವಿಚಾರದಲ್ಲಿ ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಿದೆ.
ಖರೀದಿ ವೆಚ್ಚ ಬಹಿರಂಗಪಡಿಸಲು ಆಸ್ಪತ್ರೆಗಳ ವಿರೋಧ
ಆಸ್ಪತ್ರೆಗಳ ಬಿಲ್ನಲ್ಲಿ ಔಷಧಿಗಳ ಮಾರಾಟ ದರದ ಜೊತೆಗೆ ಲ್ಯಾಂಡಿಂಗ್ ಕಾಸ್ಟ್ ವಿವರಗಳನ್ನು ನಮೂದಿಸುವುದರಿಂದ ಸಮಸ್ಯೆಯಾಗಬಹುದು ಎಂಬುದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ವಾದವಾಗಿದೆ. ಈ ವಿವರಗಳು ಬಹಿರಂಗವಾದರೆ ತಮ್ಮ ವ್ಯಾಪಾರ ರಹಸ್ಯಗಳಿಗೆ ಧಕ್ಕೆಯಾಗಬಹುದು. ಅಲ್ಲದೆ, ಔಷಧ ಕಂಪನಿಗಳು ಆಸ್ಪತ್ರೆಗಳಿಗೆ ನೀಡುತ್ತಿರುವ ರಿಯಾಯಿತಿಗಳನ್ನು ಸ್ಥಗಿತಗೊಳಿಸುವ ಸಾಧ್ಯತೆಯೂ ಇದೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಔಷಧಿಗಳ ಬೆಲೆ ನಿಗದಿ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರದ ವ್ಯಾಪ್ತಿಗೆ ಬರಬಹುದಾದ್ದರಿಂದ, ಈ ಕುರಿತು ಕಾನೂನು ಅಭಿಪ್ರಾಯ ಪಡೆದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಅಲ್ಲಿಯವರೆಗೆ ಔಷಧಿ ದರ ನಮೂದಿಸುವ ಆದೇಶಕ್ಕೆ ತಾತ್ಕಾಲಿಕ ತಡೆ ಮುಂದುವರಿಯಲಿದೆ.
ಮೃತದೇಹ ಹಸ್ತಾಂತರದ ಬಗ್ಗೆಯೂ ಚರ್ಚೆ
ಸಭೆಯಲ್ಲಿ ಬಿಲ್ ಪಾವತಿಸದ ಕಾರಣಕ್ಕೆ ಮೃತದೇಹ ಹಸ್ತಾಂತರವನ್ನು ತಡೆಹಿಡಿಯುವ ವಿಚಾರವೂ ಚರ್ಚೆಗೆ ಬಂದಿದೆ. ಬಿಲ್ ಪಾವತಿಯಾಗಿಲ್ಲ ಎಂಬ ಕಾರಣಕ್ಕೆ ಮೃತದೇಹ ಹಸ್ತಾಂತರಿಸದೆ ತಡೆಹಿಡಿಯುವ ಪ್ರಕರಣಗಳು ಇತ್ತೀಚೆಗೆ ನಡೆಯುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಪ್ರತಿನಿಧಿಗಳು ಸಚಿವರಿಗೆ ತಿಳಿಸಿದ್ದಾರೆ.
ಮೃತದೇಹ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಯಮಗಳಿದ್ದು, ಅವುಗಳನ್ನು ಪಾಲಿಸಲಾಗುತ್ತಿದೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.















