ಮಣಿಪಾಲ: ಕೊರೊನಾ ವೈರಸ್ (ಕೋವಿಡ್ 19) ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಎಲ್ಲಾ ಹೊರರೋಗಿ ಸೇವೆಯನ್ನು ಜುಲೈ 21ರ ಮಂಗಳವಾರದಿಂದ ಜುಲೈ 26ರ ವರೆಗೆ ಸ್ಥಗಿತಗೊಳಿಸಿದೆ. ಜುಲೈ 27ರಿಂದ ಹೊರರೋಗಿ ವಿಭಾಗವು ಎಂದಿನಂತೆ ಸೇವೆ ಸಲ್ಲಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಮತ್ತು ಕಳೆದ ಕೆಲವು ದಿನಗಳಿಂದ ನಮ್ಮ ಅನೇಕ ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕಿಗೆ ತುತ್ತಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಇಡೀ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗಿದೆ ಹಾಗೂ 200 ಕೋವಿಡ್ 19 ಹಾಸಿಗೆಯನ್ನು ಸಿದ್ಧಪಡಿಸಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊರರೋಗಿ ವಿಭಾಗವನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.












