ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ‘ಸೂಪರ್‌ಸ್ಟಾರ್’ ಎಂದೇ ಪರಿಚಿತರಾಗಿದ್ದ ಹಿರಿಯ ನಟ ಕೃಷ್ಣ ಅವರು ಆಸ್ಪತ್ರೆಗೆ ದಾಖಲಾದ ಒಂದು ದಿನದ ಬಳಿಕ ಮಂಗಳವಾರ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ. ಕೃಷ್ಣ ಜನಪ್ರಿಯ ನಟ ಮಹೇಶ್ ಬಾಬು ಅವರ ತಂದೆ. ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಿಧನರಾಗಿದ್ದರು ಮತ್ತು ಅದಕ್ಕೂ ಮುನ್ನ ಅವರ ಹಿರಿಯ ಸಹೋದರ ರಮೇಶ್ ಬಾಬು ಜನವರಿಯಲ್ಲಿ ನಿಧನರಾಗಿದ್ದಾರೆ. ಒಂದೇ ವರ್ಷದಲ್ಲಿ ಕುಟುಂಬದ ಮೂವರನ್ನು ಮಹೇಶ್ ಕಳೆದುಕೊಂಡಿದ್ದಾರೆ.
ಘಟ್ಟನಾನೇನಿ ಶಿವರಾಮ ಕೃಷ್ಣ ಮೂರ್ತಿ ಎಂಬ ಪೂರ್ಣ ಹೆಸರಿನ ಕೃಷ್ಣ ಅವರು ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸುದ್ದಿ ಸಂಸ್ಥೆ ಎ.ಎನ್.ಐ ತಿಳಿಸಿದೆ.
ಕೃಷ್ಣ ಅವರು ಮಾಜಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು ತೆಲುಗು ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ಐದು ದಶಕಗಳ ಕಾಲದ ಚಲನಚಿತ್ರ ವೃತ್ತಿಜೀವನದಲ್ಲಿ, ಅವರು 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣ 1965 ರ ತೇನೆ ಮನಸುಲು ಚಲನಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿ ಸಾಕ್ಷಿ, ಪಾಂಡಂಟಿ ಕಾಪುರಂ, ಗುಡಾಚಾರಿ 116, ಜೇಮ್ಸ್ ಬಾಂಡ್ 777, ಏಜೆಂಟ್ ಗೋಪಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ತೆಲುಗು ಚಲನಚಿತ್ರೋದ್ಯಮದಲ್ಲಿ ಮೊದಲ ಸಿನಿಮಾಸ್ಕೋಪ್ ಚಿತ್ರ – ಅಲ್ಲೂರಿ ಸೀತಾರಾಮ ರಾಜು (1974), ಮೊದಲ ಈಸ್ಟ್‌ಮ್ಯಾನ್‌ಕಲರ್ ಚಿತ್ರ – ಈನಾಡು (1982), ಮೊದಲ 70ಎಂಎಂ ಚಿತ್ರ – ಸಿಂಹಾಸನಂ (1986), ಮೊದಲ ಡಿಟಿಎಸ್ ಚಿತ್ರ ತೆಲುಗು ವೀರ ಲೆವರ (1995) ಮುಂತಾದ ಅನೇಕ ತಾಂತ್ರಿಕ ಪ್ರಥಮಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತೆಲುಗು ತೆರೆಗೆ ಕೌಬಾಯ್ ಪ್ರಕಾರವನ್ನು ಪರಿಚಯಿಸಿರುವ ಶ್ರೇಯವೂ ಕೃಷ್ಣರವರಿಗೆ ಸಲ್ಲುತ್ತದೆ.
ಹಿರಿಯ ನಟ ಕೃಷ್ಣ ಮೃತ್ಯುವಿಗೆ ಪ್ರಧಾನಿಯಾದಿಯಾಗಿ ಗಣ್ಯರು ಸಂತಾಪ ಸೂಚಿಸಿದ್ದಾರೆ.