ನವದೆಹಲಿ: ಸಂಕಷ್ಟದಲ್ಲಿರುವ ಟೆಲಿಕಾಂ ಪಿಎಸ್ಯುವಾದ ಬಿಎಸ್ಎನ್ಎಲ್ನ ಉದ್ಯೋಗಿಗಳಿಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಉದ್ಯೋಗಿಗಳು ತಮ್ಮ ‘ಸರ್ಕಾರಿ’ ಧೋರಣೆಯನ್ನು ತ್ಯಜಿಸುವಂತೆ ಹೇಳಿದ ಅವರು, ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದವರಿಗೆ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ ಮತ್ತು ಗಂಟು ಮೂಟೆ ಕಟ್ಟಿ ಮನೆಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.
ಎಂಟಿಎನ್ಎಲ್ಗೆ ‘ಭವಿಷ್ಯವಿಲ್ಲ’ ಹಾಗಾಗಿ ನಾವು ಅಲ್ಲಿ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಎಂಟಿಎನ್ಎಲ್ ನ ನಿರ್ಬಂಧಗಳು ಮತ್ತು ಅದು ಯಾವ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿ ವಿಭಿನ್ನ ಕಸರತ್ತು ನಡೆಸಿ, ಮುಂದಿನ ಕ್ರಮಗಳೇನು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಿಎಸ್ಎನ್ಎಲ್ನ 62,000 ಉದ್ಯೋಗಿಗಳ ಸಂಸ್ಥೆಗೆ ನೀಡಿರುವ ಕಠಿಣ ಸಂದೇಶದ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ವೈಷ್ಣವ್ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ಬಿಎಸ್ಎನ್ಎಲ್ಗೆ 1.64 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪುನರುಜ್ಜೀವನ ಪ್ಯಾಕೇಜ್ ಅನ್ನು ಸರ್ಕಾರದ ವತಿಯಿಂದ ನೀಡಲಾಗಿದೆ. ಈ ಬಗ್ಗೆ ಸಂಸ್ಥೆಯ ಹಿರಿಯ ನಿರ್ವಹಣಾ ತಂಡದೊಂದಿಗೆ ಸಭೆ ನಡೆಸಿರುವ ಸಚಿವರು “ನಿಮ್ಮಿಂದ ಏನನ್ನು ನಿರೀಕ್ಷಿಸಲಾಗಿದೆಯೋ ಅದನ್ನು ನೀವು ಮಾಡಬೇಕು. ಇಲ್ಲದಿದ್ದರೆ, ಪ್ಯಾಕ್ ಅಪ್ ಮಾಡಿ. ಈ ಬಗ್ಗೆ ನಿಮಗೆ ಯಾವುದೇ ಅನುಮಾನ ಬೇಡ. ಇನ್ನು ಮುಂದೆ ಇದೇ ರೂಢಿ ಮತ್ತು ಇದೇ ಹೊಸ ಸಾಮಾನ್ಯ ಕೆಲಸದ ಸಂಸ್ಕೃತಿಯಾಗಿರುತ್ತದೆ. ಪ್ರದರ್ಶಿಸಿ ಅಥವಾ ಅಳಿದು ಹೋಗಿ” ಎಂದಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.