ತಹಶಿಲ್ದಾರ್ ಅಜಿತ್‌ ಕುಮಾರ್‌ ರೈ ಸರಕಾರಿ ಹುದ್ದೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ

ಬೆಂಗಳೂರು: ಬೆಂಗಳೂರಿನಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಲ್ಲಿ ಬಂಧಿತರಾಗಿರುವ ಕೆ ಆರ್‌ ಪುರಂನ ತಹಶೀಲ್ದಾರ್, ಪುತ್ತೂರು ಮೂಲದ ಅಜಿತ್‌ ಕುಮಾರ್‌ ರೈ ಅವರನ್ನು ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಸರಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ತಹಸಿಲ್ದಾರ್ ಅಜಿತ್ ರೈ ಅವರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು, 1957 ರ ನಿಯಮ 10(1)(ಎ)(ಎ) ಮತ್ತು 10(2)(ಎ) ಅನ್ವಯ ಮುಂದಿನ ಆದೇಶದ ವರೆಗೆ ಇಲಾಖಾ ವಿಚಾರಣೆ ಬಾಕಿ ಇರಿಸಿ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.

ಇನ್ನು ಅಜಿತ್ ರೈಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳು, ಐಷಾರಾಮಿ ಕಾರು ಮತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದರು. 4 ಥಾರ್ ಕಾರ್, 4 ಫಾರ್ಚೂನರ್ ಕಾರ್, 3 ರಾಯಲ್ ಎನ್‌ಫೀಲ್ಡ್, 1 ಲ್ಯಾಂಡ್ ಕ್ರೂಸರ್ (2.5 ಕೋಟಿ ಮೌಲ್ಯ) ಹೊಂದಿದ್ದು, ಎಲ್ಲ ಕಾರಿಗೂ ಒಂದೇ ನಂಬರ್ ರಿಜಿಸ್ಟರ್ ಇದೆ. ಆದರೆ ಇದ್ಯಾವುದಕ್ಕೂ ಅಜಿತ್ ರೈ ಲೆಕ್ಕ ಕೊಡುತ್ತಿಲ್ಲ ಎನ್ನಲಾಗಿದೆ.

ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿವೆ.