ಮಣಿಪಾಲ: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯೋಜಿಸಿರುವ ತಾಂತ್ರಿಕ ಉತ್ಸವದಲ್ಲಿ ಭಾಗವಹಿಸಿದ್ದು ಸಂತೋಷದ ವಿಚಾರ. ಈ ಸಂಸ್ಥೆಯನ್ನು ವ್ಯಾಪಿಸಿರುವ ಶಕ್ತಿ, ಸ್ವಂತಿಕೆ ಮತ್ತು ಬುದ್ಧಿವಂತಿಕೆಯು ಸ್ಪೂರ್ತಿದಾಯಕವಾಗಿದೆ. ಈ ರೀತಿಯ ಕಾರ್ಯಕ್ರಮಗಳು ಆವಿಷ್ಕಾರವನ್ನು ಒಂದು ತಂಡವಾಗಿ ಕೆಲಸ ಮಾಡಲು ಉತ್ತೇಜಿಸುತ್ತದೆ ಮತ್ತು ಇದರಿಂದ ಮುಂದಿನ ಪೀಳಿಗೆಯ ಎಂಜಿನಿಯರ್ಗಳು ಮತ್ತು ಆವಿಷ್ಕಾರಕರನ್ನು ತಾಂತ್ರಿಕ ಶ್ರೇಷ್ಠತೆಯನ್ನು ಪ್ರದರ್ಶಿಸಲು ಮಾತ್ರವಲ್ಲದೆ ಭವಿಷ್ಯದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರಿಗೂ ಹೊಸ ಆಲೋಚನೆಗಳನ್ನು ಅನ್ವೇಷಿಸಲು, ಅಧ್ಯಯನ ಮಾಡಲು ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವುದಕ್ಕೆ ನಾನು ಒತ್ತಾಯಿಸುತ್ತೇನೆ. ಪ್ರಶ್ನೆಗಳನ್ನು ಕೇಳುವುದು, ಮತ್ತು ಉತ್ತಮವಾಗುವುದನ್ನು ಎಂದಿಗೂ ನಿಲ್ಲಿಸಬೇಡಿ. ವೈಫಲ್ಯವನ್ನು ಸಾಧನೆಯ ಮೆಟ್ಟಿಲು ಎಂದು ಸ್ವೀಕರಿಸಿ ಎಂದು ಎಂಐಟಿಯ ಹಳೆಯ ವಿದ್ಯಾರ್ಥಿ, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದರು.
ಮಾಹೆ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಉತ್ಸವ- ‘ಟೆಕ್ ತತ್ತ್ವ -23’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಲ್ಲಿ ಕಂಡ ಪ್ರತಿಭೆ ಮತ್ತು ಉತ್ಸಾಹದಿಂದ ಪ್ರಭಾವಿತನಾಗಿದ್ದೇನೆ. ಇಂದಿನ ಪ್ರಾಜೆಕ್ಟ್ಗಳು, ಪ್ರಸ್ತುತಿಗಳು ಮತ್ತು ಸ್ಪರ್ಧೆಗಳು ಕಠಿಣ ಪರಿಶ್ರಮವನ್ನು ಮಾತ್ರವಲ್ಲ, ಸಾಧ್ಯವಿರುವ ಎಲ್ಲೆ ಮೀರಿ ನಡೆಯುವ ಸಮರ್ಪಣೆಯನ್ನೂ ಪ್ರತಿಬಿಂಬಿಸುತ್ತವೆ. ನಾವೀನ್ಯತೆಗೆ ಯಾವುದೇ ಮಿತಿಯಿಲ್ಲ, ಆಲೋಚನೆಗಳು ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದರು.
ಎಂಐಟಿಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ ಮಾತನಾಡಿ, ಸಂಸ್ಥೆಯ ದೃಷ್ಠಿಕೋನ ಮತ್ತು
ನಾವೀನ್ಯತೆಯ ವಾತಾವರಣವನ್ನು ಬೆಳೆಸುವ ಬದ್ಧತೆಯ ಬಗ್ಗೆ ತಿಳಿಸಿದರು.
ಸಂಚಾಲಕಿ ವಿನಮ್ರಾ ಚೌಧರಿ ಮತ್ತು ಮನಸ್ವಿ ಜಾದವ್, ಉತ್ಸವದ ಬಗ್ಗೆ ತಮ್ಮ ದೃಷ್ಟಿಕೋನದ ಒಳನೋಟಗಳನ್ನು ಹಂಚಿಕೊಂಡರು.
ಈ ಉತ್ಸವವು ತಂತ್ರಜ್ಞಾನದ ಪರಿವರ್ತಕ ಶಕ್ತಿ ಮತ್ತು ನಮ್ಮ ಪ್ರಪಂಚದ ಮೇಲೆ ಅದರ ಮಹತ್ವದ ಪ್ರಭಾವವನ್ನು ಎತ್ತಿ ತೋರಿಸುತ್ತದೆ. ‘ಟೆಕ್ ತತ್ತ್ವ-23’ ಅನ್ನು ಮಾಹೆ ಸಂಸ್ಥಾಪಕ ಡಾ. ಟಿಎಮ್ಎ ಪೈ ಅವರ 125 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಚರಿಸಲಾಯಿತು.
ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್, ವೈಸ್ ಚಾನ್ಸಲರ್ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್, ಪ್ರೊ ವೈಸ್ ಚಾನ್ಸೆಲರ್ – ತಂತ್ರಜ್ಞಾನ ಮತ್ತು ವಿಜ್ಞಾನ – ಡಾ.ನಾರಾಯಣ ಸಭಾಹಿತ್, ಪ್ರೊ ವೈಸ್-ಚಾನ್ಸೆಲರ್ ಕಾರ್ಯತಂತ್ರ ಮತ್ತು ಯೋಜನೆ ಡಾ.ಎನ್.ಎನ್.ಶರ್ಮಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ ಜಿ ಮುತ್ತಣ್ಣ, ರಿಜಿಸ್ಟ್ರಾರ್ – ಡಾ. ಪಿ. ಗಿರಿಧರ್ ಕಿಣಿ, ರಿಜಿಸ್ಟ್ರಾರ್ ಮೌಲ್ಯಮಾಪನ – ಡಾ ವಿನೋದ್ ವಿ. ಥಾಮಸ್, ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮಶೇಖರ ಭಟ್, ಎಂಐಟಿಯ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಸಹ ನಿರ್ದೇಶಕಿ ಡಾ.ಪೂರ್ಣಿಮಾ ಕುಂದಾಪುರ ಉಪಸ್ಥಿತರಿದ್ದರು.