ಟೆಕ್ ಕಿಂಗ್ ಆಪಲ್ ಸಂಸ್ಥೆಗೆ ಹೊಸ ನಾಯಕತ್ವ; ಸಿಇಓ ಆಗಿ ಜಾನ್ ಟೆರ್ನಸ್ ನೇಮಕ

ಕ್ಯಾಲಿಫೋರ್ನಿಯಾ: ಜಾಗತಿಕ ತಂತ್ರಜ್ಞಾನ ದಿಗ್ಗಜ ಆಪಲ್ ಸಂಸ್ಥೆಯಲ್ಲಿ ದೀರ್ಘಕಾಲ ಸಿಇಒ ಆಗಿದ್ದ ಟಿಮ್ ಕುಕ್ ಅವರು ತಮ್ಮ ಸ್ಥಾನತ್ಯಾಗ ಮಾಡಿದ್ದು, ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಹಿರಿಯ ನಾಯಕ ಜಾನ್ ಟೆರ್ನಸ್ ಅವರನ್ನು ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ವಿಸ್ತರಿಸುತ್ತಿರುವ ಸಮಯದಲ್ಲಿ ಈ ಬದಲಾವಣೆ ನಡೆದಿರುವುದು ಗಮನ ಸೆಳೆದಿದೆ. ಹೊಸ ಸಿಇಒ ಜಾನ್ ಟೆರ್ನಸ್ ಮುಂದೆ ಆಪಲ್‌ನ AI ಯುಗದ ಸವಾಲುಗಳನ್ನು ಎದುರಿಸುವ ಮಹತ್ವದ ಹೊಣೆಗಾರಿಕೆ ಇದೆ ಎಂದು ವರದಿಗಳು ಹೇಳುತ್ತವೆ.

ತಮ್ಮ ನಿರ್ಗಮನದ ಕುರಿತು ಟಿಮ್ ಕುಕ್ ಭಾವನಾತ್ಮಕ ಸಂದೇಶ ನೀಡಿದ್ದು, ಆಪಲ್ ಸಂಸ್ಥೆಯನ್ನು ಮುನ್ನಡೆಸುವುದು ತಮ್ಮ ಜೀವನದ ಅತ್ಯಂತ ದೊಡ್ಡ ಗೌರವವಾಗಿತ್ತು ಎಂದು ಹೇಳಿದ್ದಾರೆ. ಸ್ಟೀವ್ ಜಾಬ್ಸ್ ಅವರ ಕನಸನ್ನು ಮುಂದುವರಿಸಲು ಪ್ರಯತ್ನಿಸಿದ್ದೇನೆ ಎಂದು ಅವರು ಉಲ್ಲೇಖಿಸಿದ್ದಾರೆ.

2011ರಲ್ಲಿ ಸ್ಟೀವ್ ಜಾಬ್ಸ್ ನಂತರ ಸಿಇಒ ಸ್ಥಾನ ಸ್ವೀಕರಿಸಿದ ಕುಕ್ ಅವರ ಅವಧಿಯಲ್ಲಿ ಆಪಲ್ ಕಂಪನಿ ಅಪಾರ ಬೆಳವಣಿಗೆ ಕಂಡಿದ್ದು, ಮಾರುಕಟ್ಟೆ ಮೌಲ್ಯವು 3 ಟ್ರಿಲಿಯನ್ ಡಾಲರ್ ಗಡಿ ದಾಟಿದೆ. ಈ ಅವಧಿಯಲ್ಲಿ ಆಪಲ್ ವಾಚ್, ಏರ್‌ಪಾಡ್ಸ್ ಮತ್ತು ವಿಷನ್ ಪ್ರೊ ಸೇರಿದಂತೆ ಅನೇಕ ಹೊಸ ಉತ್ಪನ್ನಗಳು ಬಿಡುಗಡೆಗೊಂಡಿವೆ.

ಜಾನ್ ಟೆರ್ನಸ್ 2001ರಿಂದ ಆಪಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಾರ್ಡ್‌ವೇರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಫೋನ್, ಐಪ್ಯಾಡ್ ಹಾಗೂ M-ಸರಣಿ ಚಿಪ್‌ಗಳ ಅಭಿವೃದ್ಧಿಯಲ್ಲಿ ಅವರ ಕೊಡುಗೆ ವಿಶೇಷವಾಗಿದೆ ಎಂದು ವರದಿಯಾಗಿದೆ.

ಟಿಮ್ ಕುಕ್ ಅವರು ಮುಂದುವರಿದು ಎಕ್ಸಿಕ್ಯೂಟಿವ್ ಚೇರ್ಮನ್ ಆಗಿ ಸಂಸ್ಥೆಯಲ್ಲಿ ಉಳಿಯಲಿದ್ದು, ಹೊಸ ಸಿಇಒಗೆ ಮಾರ್ಗದರ್ಶನ ನೀಡಲಿದ್ದಾರೆ.

ಈ ಬದಲಾವಣೆ ತಂತ್ರಜ್ಞಾನ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಆಪಲ್ ಕಂಪನಿಯ ಮುಂದಿನ ದಿಕ್ಕು ಕುರಿತು ಜಾಗತಿಕ ಕುತೂಹಲ ಹೆಚ್ಚಾಗಿದೆ.