ಕಣ್ಣೀರಿಟ್ಟ ವಿನೇಶ್‌ ಫೋಗಟ್‌ : ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ ಎಂದು ಹೇಳಿಕೆ

ಹೊಸದಿಲ್ಲಿ: “ಫೆಡರೇಷನ್‌ ಅಧ್ಯಕ್ಷರಾಗಿ ಸಂಜಯ ಸಿಂಗ್‌ ಆಯ್ಕೆಯಾಗಿರುವುದರಿಂದ ಮಹಿಳಾ ಕುಸ್ತಿಪಟುಗಳು ಕಿರುಕುಳ ಎದುರಿಸುವುದು ಮುಂದುವರಿಯಲಿದೆ,” ಎಂದು ವಿನೇಶ್‌ ಫೋಗಟ್‌ ಹೇಳಿದರು. “ದೇಶದಲ್ಲಿ ನ್ಯಾಯ ಹೇಗೆ ಪಡೆದುಕೊಳ್ಳುವುದು ಎಂದು ತಿಳಿದಿಲ್ಲ,” ಎಂದು ಕಾಮನ್ವೆಲ್ತ್ ಮತ್ತು ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆಯಾಗಿರುವ ಫೋಗಟ್‌ ಹೇಳಿದರು.

ಭಾರತದ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧದ ಪ್ರತಿಭಟನೆಯ ಮುಂಚೂಣಿಯಲ್ಲಿದ ಕುಸ್ತಿಪಟು ವಿನೇಶ್‌ ಫೋಗಟ್‌, ಗುರುವಾರ ಫೆಡರೇಷನ್‌ಗೆ ನಡೆದ ಚುನಾವಣೆಯಲ್ಲಿ ಬ್ರಿಜ್‌ ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ಗೆಲುವು ಸಾಧಿಸುತ್ತಿದ್ದಂತೆಯೇ ಮಾದ್ಯಮದೆದುರು ಮಾತನಾಡುತ್ತಿರುವಾಗಲೇ ದುಃಖತಪ್ತರಾಗಿ ಕಣ್ಣೀರು ಸುರಿಸಿದರು.

ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ಮಾತನಾಡಿ, “ಫೆಡರೇಷನ್‌ಗೆ ಮಹಿಳಾ ಅಧ್ಯಕ್ಷೆ ದೊರೆಯಬೇಕೆಂದು ಬಯಸಿದ್ದೆವು. ಆದರೆ ಹಾಗಾಗಲಿಲ್ಲ. ನಾವು ಹೋರಾಡಿದೆವು. ಹೊಸ ಅಧ್ಯಕ್ಷ ಬ್ರಿಜ್‌ ಭೂಷಣ್‌ ಆಪ್ತ, ಅವರ ಉದ್ಯಮ ಪಾಲುದಾರನೆಂದಾದರೆ ನಾನು ಕುಸ್ತಿ ತೊರೆಯುತ್ತೇನೆ,” ಎಂದು ಸಾಕ್ಷಿ ಹೇಳಿದ್ದಾರೆ. “ನಿರೀಕ್ಷೆಗಳು ಕನಿಷ್ಠ ಆದರೂ ನ್ಯಾಯ ಸಿಗಬಹುದೆಂಬ ಆಶಾಭಾವನೆಯಿದೆ. ಆದರೆ ಕುಸ್ತಿ ಕ್ರೀಡೆಯ ಭವಿಷ್ಯ ಕತ್ತಲಿನಲ್ಲಿದೆ ಎಂದು ತಿಳಿದು ಬೇಸರವಾಗುತ್ತಿದೆ. ನಮ್ಮ ದುಃಖ ಯಾರೊಂದಿಗೆ ಹೇಳಿಕೊಳ್ಳಲಿ, ನಾವು ಇನ್ನೂ ಹೋರಾಡುತ್ತಿದ್ದೇವೆ,” ಎಂದು ಫೋಗಟ್‌ ಹೇಳಿದರು.