ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಅಕ್ರಮದ ಆರೋಪ ಹೊರಿಸಿದ ಶಶಿ ತರೂರ್ ತಂಡ

ನವದೆಹಲಿ: ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಉನ್ನತ ಹುದ್ದೆಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಶಶಿ ತರೂರ್ ನೇತೃತ್ವದ ಪಾಳಯವು ಉತ್ತರ ಪ್ರದೇಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಿಸಿದೆ.

ಅಕ್ಟೋಬರ್ 19 ರಂದು, ಲೋಕಸಭಾ ಸಂಸದ ಶಶಿ ತರೂರ್ ಪರವಾಗಿ ಕಾಂಗ್ರೆಸ್ ನಾಯಕ ಸಲ್ಮಾನ್ ಸೋಜ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ “ಅತ್ಯಂತ ಗಂಭೀರ ಅಕ್ರಮಗಳು” ನಡೆದಿವೆ ಎಂದು ಆರೋಪಿಸಿದ್ದಾರೆ.

ಸೋಜ್ ತಮ್ಮ ಪತ್ರದಲ್ಲಿ “ಈ ಚುನಾವಣೆಯಲ್ಲಿ ಮತದಾರರ ವಂಚನೆಯನ್ನು ನಾವು ಅನುಮಾನಿಸುತ್ತೇವೆ. ಮತದಾನದ ದಿನದಂದು ಲಕ್ನೋ ಪ್ರದೇಶದಲ್ಲಿ ಹಾಜರಿರದ ಪ್ರತಿನಿಧಿಗಳಿದ್ದರು ಆದರೆ ಅವರ ಮತಗಳನ್ನು ಚಲಾಯಿಸಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.

ಉತ್ತರ ಪ್ರದೇಶದ “ಕಳಂಕಿತ” ಪ್ರಕ್ರಿಯೆಗೆ ಅವಕಾಶ ನೀಡಿದರೆ ಈ ಚುನಾವಣೆಗಳು ‘ಮುಕ್ತ’ ಮತ್ತು ‘ನ್ಯಾಯಯುತ’ವೆಂದು ಶಶಿ ತರೂರ್ ಅವರ ತಂಡವು ನೋಡುವುದಿಲ್ಲ ಎಂದಿರುವ ಅವರು ಉತ್ತರ ಪ್ರದೇಶದ ಎಲ್ಲಾ ಮತಗಳನ್ನು ಅಮಾನ್ಯವೆಂದು ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ.

ನಾವು ಮಧುಸೂದನ್ ಮಿಸ್ತ್ರಿ ಅವರ ಕಚೇರಿಯೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದೇವೆ, ವಿವಿಧ ವಿಷಯಗಳ ಬಗ್ಗೆ ಅವರಿಗೆ ತಿಳಿಸಿದ್ದೇವೆ, ಇದೀಗ ಅದರ ವಿವರಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಶಶಿ ತರೂರ್ ಅವರ ಚುನಾವಣಾ ಏಜೆಂಟ್ ಸಲ್ಮಾನ್ ಸೋಜ್ ಹೇಳಿದ್ದಾರೆ ಎಂದು ಎ.ಎನ್.ಐ ವರದಿ ಮಾಡಿದೆ.