ಅಮ್ಮನ ಅಪ್ಪುಗೆಯಿಂದ, ಅಪ್ಪನ ಅಕ್ಕರೆಯಿಂದ ಮಗು ಮುಂದಡಿ ಇಡುವುದು ತನ್ನ ಸುಂದರ ಭವಿಷ್ಯವನ್ನ ರೂಪಿಸುವ ವಿದ್ಯಾಮಂದಿರದತ್ತ. ತಂದೆ -ತಾಯಿ, ಬಂಧು-ಬಳಗದ ಕಾಳಜಿಯಲ್ಲಿ ಬೆಳದ ಮಗು, ಅಕ್ಷರಾಭ್ಯಾಸದ ಗುರಿಯಿಟ್ಟು ವಿದ್ಯಾಮಂದಿರಕ್ಕೆ ಕಾಲಿಟ್ಟಾಗ ಅದೇ ಅಕ್ಕರೆ ಆಪ್ತತೆಯಲ್ಲಿ, ಕಾಳಜಿಯಲ್ಲಿ ಕೈ ಹಿಡಿದು ಒಳ ಕರೆದು ಅದೇ ಸಲುಗೆ ಪ್ರೀತಿಯಲ್ಲಿ ಅಕ್ಕರೆ ಜೊತೆಗೆ ಅಕ್ಷರವ ಕಲಿಸಿ, ಅತ್ತಾಗ ಕಣ್ಣೋರೆಸಿ, ಮಾತು ತಪ್ಪಿದಾಗ ಗದರಿಸಿ, ನಮ್ಮೆಲ್ಲ ಬೇಕು ಬೇಡಗಳ ಜೊತೆಗೆ ಒಂದಿಷ್ಟು ಸಂಸ್ಕಾರ,ಶಿಸ್ತು, ಸಾಮಾಜಿಕ ಕಳಕಳಿ, ನೈತಿಕ ಮೌಲ್ಯವನ್ನ ನಮ್ಮೊಳಗೇ ಹುಟ್ಟುಹಾಕುವವರು ನಮ್ಮ ಶಿಕ್ಷಕರು.
ಬದುಕಿನ ಪ್ರತಿ ಕ್ಷಣದಲ್ಲೂ ಒಂದಲ್ಲ ಒಂದು ದಿನ ನಮ್ಮ ಸ್ಮೃತಿತಿಪಟಲದಲ್ಲಿ ನಾ ಕಲಿತ ಶಾಲೆ ಹಾದು ಹೋಗುವಾಗ ನಮ್ಮ ಮನ ಮೆಚ್ಚಿದ ಒಂದಿಷ್ಟು ಶಿಕ್ಷಕರು, ತಪ್ಪು ಮಾಡಿದಾಗ ಗದರಿಸಿ ಸರಿ ದಾರಿಗೆ ತಂದ ಶಿಕ್ಷಕರೋ, ನನ್ನೊಳಗಿನ ಪ್ರತಿಭೆಗೆ ಮನ್ನಣೆಕೊಟ್ಟ ಶಿಕ್ಷಕರೋ, ನನ್ನ ಕಷ್ಟಕ್ಕೆ ಸ್ಪಂದಿಸಿ ಬಾಳಿನ ದಾರಿದೀಪವಾದ ಶಿಕ್ಷಕರು ಕಣ್ಣೆದುರು ಬಾರದೇ ಇರಲಾರರು.
ನಮ್ಮಲ್ಲಿ ಒಂದಿಷ್ಟು ಜನ ಆಗಾಗ ತಮ್ಮ phoneನಿಂದ ಒಂದು ಕರೆಯೋ ಇಲ್ಲ ಒಂದು ಸಂದೇಶವನ್ನಾದರೂ ಆಗಾಗ ತಮ್ಮ ಗುರುವಿಗೆ ಕಳುಹಿಸಬಹುದು. ಆದರ ಹೊರತಾಗಿ ಎಲ್ಲರೂ ತಮ್ಮ ಗುರುಗಳ ಸ್ಮರಿಸಲು ಇರುವ ಒಂದೊಳ್ಳೆ ದಿನ. ಕೊರೋನಾ ಮಹಾಮಾರಿ ಅಬ್ಬರದಿಂದ ಶಿಕ್ಷಣ ವ್ಯವಸ್ಥೆ ಮಾರ್ಪಾಡುಗೊಂಡು ಇಂದಿನ ಯುವಪೀಳಿಗೆ ಮತ್ತು ಶಿಕ್ಷಕರ ಭಾವನಾತ್ಮಕ ಬೆಸುಗೆ ಸ್ವಲ್ಪ ಮಟ್ಟಿಗೆ ದೂರವಾಗಿರಬಹುದು, ಆದರೂ ಶಿಕ್ಷಕರು ಮಗುವಿನ ಕಲಿಕೆಗೆ ಪೂರಕವಾಗುವ ಎಲ್ಲ ಬದಲಾವಣೆಯೊಂದಿಗೆ ಹೊಂದಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಶಿಕ್ಷಣ ನೀಡುವಲ್ಲಿ, ಮಕ್ಕಳ ಭವಿಷ್ಯವನ್ನ ರೂಪಿಸುವಲ್ಲಿ ಶ್ರಮಿಸುತ್ತಲೇ ಇದ್ದಾರೆ. ಅದೇನೇ ಅಂದರೂ, ಅದೇನೇ ಆದರೂ ಬದುಕಿಗೆ ದಾರಿ ನೀಡುವ, ಅರಿವನ್ನ ಕೊಡುವ ಶಿಕ್ಷಕರ ಕುರಿತು ಗೌರವ ಸದಾ ಇರಲಿ.
ನಿಮ್ಮ ಬದುಕಿನ ನೆನಪುಗಳ ಜೋಳಿಗೆಯಲ್ಲಿ ಸದಾ ನಿಮ್ಮ ಶಿಕ್ಷಕರೂ ಇರಲಿ. ನಿಮ್ಮೆಲ್ಲರ ಕಡೆಯಿಂದ ಸಮಸ್ತ ಶಿಕ್ಷಕರಿಗೂ ಇರಲಿ ಆತ್ಮೀಯವಾದ ಶುಭಾಶಯ. ಶಿಕ್ಷಕರ ದಿನಾಚರಣೆಯ ಸವಿಗಳಿಗೆಯಲ್ಲಿ ನಲ್ಮೆಯ ಶಿಕ್ಷಕರಿಗೆಲ್ಲ “ಶಿಕ್ಷಕರ ದಿನಚರಣೆಯ ಹಾರ್ದಿಕ ಶುಭಾಶಯಗಳು “…
ಮಂಜುಳಾ. ಜಿ. ತೆಕ್ಕಟ್ಟೆ, ಉಪನ್ಯಾಸಕಿ