ತ್ರಿಶಾ ಹಾಗೂ ಕ್ರಿಯೇಟಿವ್ ಕಾಲೇಜು ವತಿಯಿಂದ ಶಿಕ್ಷಕರ ದಿನಾಚರಣೆ; ಮೊಸರು ಕುಡಿಕೆ ಉತ್ಸವ

ಉಡುಪಿ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ‘ಕ್ರಿಯೇಟಿವ್ ಗುರು ದೇವೋಭವ’ ಕಾರ್ಯಕ್ರಮವನ್ನು ಸೆ.07ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಮೃತ ರೈ ಮಾತನಾಡಿ, ವಿದ್ಯಾರ್ಥಿಗಳು ಜೀವನ ಪರ್ಯಂತ ತನ್ನ ಜೀವನೋಪಾಯಕ್ಕೆ ಮಾರ್ಗದರ್ಶನವನ್ನು ನೀಡಿರುವ ಸಮಾಜದಲ್ಲಿ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದ ಗುರುವನ್ನು ಎಂದಿಗೂ ಮರೆಯಬಾರದು. ಬಾಗುವುದು ನಮ್ಮತನವಾಗಬೇಕೆ ಹೊರತು ಬೀಗುವುದರಿಂದ ನಮಗೇನು ಸಿಗಲಾರದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಸಂಸ್ಥೆಯ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ನವ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಸಮಾಜಕ್ಕೆ ನೀಡುವಲ್ಲಿ ಶಿಕ್ಷಕರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ ಎಂದರು.

ಸನ್ಮಾನ ಕಾರ್ಯಕ್ರಮ

ಕ್ರಿಯೇಟಿವ್ ಗುರು ದೇವೋಭವ ಕಾರ್ಯಕ್ರಮದಲ್ಲಿ ಉಡುಪಿಯ ಕಲ್ಯಾಣಪುರದ ಡಾ. ಟಿ. ಎಂ. ಎ. ಪೈ. ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶೇಖರ್ ಪಿ., ಬ್ರಹ್ಮಾವರ ಜಿ.ಎಮ್ . ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಕುರಿಯನ್, ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ಶಿಕ್ಷಣ ಪ್ರತಿಷ್ಠಾನದ ಪ್ರಾಂಶುಪಾಲ ಶರಣ್ ಕುಮಾರ್ ಹಾಗೂ ತ್ರಿಶ ಪದವಿ ಪೂರ್ವ ಕಾಲೇಜಿನ ಹಿಂದಿ ಉಪನ್ಯಾಸಕ ಸುಧಾಕರ್ ಐಡಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ಕಾಲೇಜಿನ ಉಪನ್ಯಾಸಕ ವೃಂದದವರಿಗೆ ಗೌರವವನ್ನು ಸಲ್ಲಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲ ಸ್ಟ್ಯಾನಿ ಲೋಬೋ ಸ್ವಾಗತಿಸಿ, ವಿದ್ಯಾರ್ಥಿಗಳಾದ ದೀಕ್ಷಿತ ನಿರೂಪಿಸಿ, ಮುಕ್ತ, ಹಿತೈಷಿಣಿ, ಶಶಾಂಕ್, ಸತೀಶ್ ಸನ್ಮಾನ ಪತ್ರವನ್ನು ವಾಚಿಸಿ, ಯುವರಾಜ್ ಬಿಕೆ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೊರಂಗ್ರಪಾಡಿಯ ಹುಲಿವೇಷ ತಂಡದವರಿಂದ ಹುಲಿಕುಣಿತ ನಡೆಯಿತು. ಹುಲಿ ಕುಣಿತದ ಹಿನ್ನೆಲೆ, ಮಹತ್ವವನ್ನು ಕನ್ನಡ ಉಪನ್ಯಾಸಕ ಸಂತೋಷ್ ತಿಳಿಸಿಕೊಟ್ಟರು. ಕೊನೆಯಲ್ಲಿ ವಿದ್ಯಾರ್ಥಿಗಳಿಗಾಗಿ ಮೊಸರು ಕುಡಿಕೆ ಕಾರ್ಯಕ್ರಮ ನಡೆಯಿತು.