ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಹಮ್ಮಿಕೊಂಡ ವಿವಿಧ ಸ್ಮರ್ಧಾತ್ಮಕ ಕಾರ್ಯಕ್ರಮಗಳನ್ನು ಶಾಲಾ ಸಂಸ್ಥಾಪಕ ರಮಾನಂದ ಗುರೂಜಿಯವರು ಉದ್ಘಾಟಿಸಿದರು.
ಹಲವು ಪ್ರತಿಭಾನ್ವಿತ ಶಿಕ್ಷಕರನ್ನು ಒಳಗೊಂಡ ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧಾತ್ಮಕವಾಗಿ ಪಾಲ್ಗೊಂಡು ವಿದ್ಯಾರ್ಥಿಗಳ ಸಂಭ್ರಮಾಚರಣೆಗೆ ಕಾರಣರಾದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಭಾವನೆಗಳ ಕೊಂಡಿ ಇದ್ದಂತೆ. ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ನೀಡಿದ ಶಿಕ್ಷಕರು ವಿದ್ಯಾರ್ಥಿಯ ಜೀವನದಲ್ಲಿ ಅತಿ ಮಹತ್ವವನ್ನು ಪಡೆಯುತ್ತಾರೆ ಅದು ಎಂದೆಂದಿಗೂ ಮರೆಯಲು ಅಸಾಧ್ಯ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟರು.
ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಸುಲಕ್ಷ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಿದ್ಯಾರ್ಥಿ ಶಮನಾ ಫಾತಿಮಾ ಸ್ವಾಗತಿಸಿದರು. ಸುಜಾತಾ ಬಾಲಸುಬ್ರಮಣ್ಯ, ಶಾಲಾ ಕೋ ಆರ್ಡಿನೇಟರ್ ಕುಸುಮ ನಾಗರಾಜ್, ಕುಮಾರಿ ಮೃಣಾಲ್ ಕೃಷ್ಣ, ಶಾಲಾ ಪ್ರಾಂಶುಪಾಲೆ ಉಷಾ ರಮಾನಂದ, ಪರಿವೀಕ್ಷಕಿ ಸ್ವಾತಿ ಆಚಾರ್ಯ ಶಾಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.