ಮಂಗಳೂರು: ಶಿಕ್ಷಕ ವೃತ್ತಿಎಂಬುದು ಅತೀ ಶ್ರೇಷ್ಟವಾದ ವೃತ್ತಿಯಾಗಿದ್ದು, ಪ್ರತಿಯೊಬ್ಬ ಶಿಕ್ಷಕನೂ ಆಯಾಯ ವಿಷಯಗಳಲ್ಲಿ ಜ್ಞಾನವನ್ನು ಹೊಂದಿದ್ದು, ತರಗತಿಗೆ ಪೂರ್ವ ಸಿದ್ಧತೆಯೊಂದಿಗೆ ಹೋಗಬೇಕು. ಅಂತಹ ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾಗುತ್ತಾರೆ. ಅಂತಹ ಗುರುಗಳೇ ವಿದ್ಯಾರ್ಥಿಗಳಿಗೆ ಆದರ್ಶ ವ್ಯಕ್ತಿಗಳಾಗುತ್ತಾರೆ. ಶಿಕ್ಷಕರು ಕೇವಲ ಪಾಠ ಮಾಡುವುದರಿಂದ ಆದರ್ಶ ವ್ಯಕ್ತಿಗಳಾಗುವುದಿಲ್ಲ, ವಿದ್ಯಾರ್ಥಿಗಳೊಂದಿಗಿನ ಒಡನಾಟ, ಆತ್ಮೀಯತೆ, ವಿಷಯವನ್ನು ಮನದಟ್ಟು ಮಾಡುವ ವಿಧಾನ, ವಿಷಯ ಜ್ಞಾನ ಇದರಿಂದ ಶಿಕ್ಷಕರು ಆದರ್ಶ ವ್ಯಕ್ತಿಗಳಾಗುತ್ತಾರೆ ಎಂದು ಪ್ರೊ.ಬಿ.ರಾಜಗೋಪಾಲ್ ಭಟ್ ಹೇಳಿದರು.
ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅವರು ವಿದ್ಯಾರ್ಥಿಗಳಿಗೆ ಕನಸಿನ ಬಗ್ಗೆ ತಿಳಿಸುತ್ತಾ, ಜೀವನದಲ್ಲಿ ನಾವು ಉತ್ತಮ ಕನಸನ್ನುಕಾಣಬೇಕು, ಹಾಗೂ ಆ ಕನಸನ್ನು ಹಿಂಬಾಲಿಸಿ ಸಾಧಿಸುವ ಪ್ರಯತ್ನ ಮಾಡಬೇಕು. ಪ್ರಯತ್ನಇಲ್ಲದ ಕನಸು ಯಾವುದಕ್ಕೂ ಯೋಗ್ಯವಲ್ಲ. ಜೀವನ ಒಂದು ಪಾಠಶಾಲೆ, ಪ್ರತಿ ಹಂತದಲ್ಲೂ ಗುರುಗಳ ಮಾರ್ಗದರ್ಶನ ಅಗತ್ಯ ಎಂದರು.
ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾ ಪ್ರಭಾ ಎನ್ ನಾಯಕ್ ಮಾತನಾಡಿ, ಯಾವುದೇ ನಿರೀಕ್ಷೆಯಿಲ್ಲದೆ ಕಲಿಸುವವರೇ ಶಿಕ್ಷಕರಾಗಿದ್ದು ಅವರು ವಿದ್ಯಾರ್ಥಿಗಳ ಏಳಿಗೆಗಾಗಿ ತಮ್ಮ ಸರ್ವಸ್ವವನ್ನುಅರ್ಪಿಸುವರು. ಶಿಕ್ಷಕರು ಯಾವುದೇ ತಾರತಮ್ಯ ಇಲ್ಲದೆ ವಿದ್ಯಾರ್ಥಿಗಳ ಶ್ರೇಯಸ್ಸಿಗೋಸ್ಕರ ಸಮರ್ಪಣಾ ಮನೋಭಾವದಿಂದ ದುಡಿಯುತ್ತಾರೆ. ಅಂತಹ ಶಿಕ್ಷಕರ ಕುರಿತು ವಿದ್ಯಾರ್ಥಿಗಳು ಕ್ಷಣಕಾಲ ಆಲೋಚನೆ ಮಾಡಬೇಕು.ಇಂತಹ ಶಿಕ್ಷಕರಿಗೆ ಹಾಗೂ ನಮ್ಮ ಓದಿಗೆ ಪೂರಕವಾಗಿ ಸಹಕರಿಸುವ ಪ್ರತಿಯೊಬ್ಬರಿಗೂ ಚಿರಋಣಿಯಾಗಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರಎಲ್. ನಾಯಕ್ ಮಾತನಾಡಿ, ಜ್ಞಾನ ಎಂಬುದೇ ಶಿಕ್ಷರ ಶಕ್ತಿ. ಅವರಲ್ಲಿರುವ ಆ ಅಗಾಧ ಜ್ಞಾನವನ್ನು ಗಳಿಸುವಲ್ಲಿ ವಿದ್ಯಾರ್ಥಿಗಳು ಪರಿಶ್ರಮಿಸಿದರೆ ಯಶಸ್ಸೆಂಬುದನ್ನು ತಲುಪಬಹುದು. ಹರ ಮುನಿದರೆ ಗುರು ಕಾಯುವ, ಆದರೆ ಗುರು ಮುನಿದರೆ ಹರ ಕೂಡ ಕಾಯಲಾರ ಎಂದು ಹೇಳಿದರು.
ಗುರುವಂದನಾ ಕಾರ್ಯಕ್ರಮದ ಮೂಲಕ ಉಪನ್ಯಾಸಕರನ್ನು ಗೌರವಿಸಲಾಯಿತು.
ಪ್ರೊ. ಬಿ. ರಾಜಗೋಪಾಲ್ ಭಟ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್, ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತುತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್‌ಎನ್.ನಾಯಕ್, ವಿನಯ್ ಕುಮಾರ್ ಬಿ., ಕರುಣಾಕರ ಬಳ್ಕೂರು ಹಾಗೂ ಇನ್ನಿತರ ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಚಂದಿರಾ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆದಿತ್ಯ ಎನ್, ಧನ್ಯವಾದ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಿಂದಿ ವಿಭಾಗದ ಮುಖ್ಯಸ್ಥ ಪ್ರಮೋದ್ ಕಿಣಿ ನಿರೂಪಿಸಿದರು. ಶಿಕ್ಷಕ ದಿನಾಚರಣೆಯ ಸಲುವಾಗಿ ವಿಶೇಷ ಭೋಜನ ಕೂಟವನ್ನು ಆಯೋಜಿಸಲಾಗಿತ್ತು.