ಮಂಗಳೂರು: ಸೋಮವಾರದಂದು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಹೆಸರಾಂತ ಇ.ಎನ್.ಟಿ ಶಸ್ತ್ರ ಚಿಕಿತ್ಸಕ ಡಾ.ಕಿಶೋರ್ ಶೆಟ್ಟಿ ಕಾರ್ಯಕರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪದವಿಪೂರ್ವ ಹಂತವೆಂಬುದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಅಡಿಪಾಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು, ಸಮರ್ಪಣಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಕನಸು ಯಾವಾಗಲೂ ದೊಡ್ಡದಾಗಿರಬೇಕು ಎಂದರು.
ಈ ಸಂದರ್ಭದಲ್ಲಿಎಕ್ಸ್ಪರ್ಟ್ ನ ನೂತನ ಸಭಾಂಗಣ ‘ಎಕ್ಸ್ಪೋಡಿಯಂ’ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಪಾತ್ರ ಮುಖ್ಯ. ನಮ್ಮ ಬದುಕಿನಲ್ಲಿ ಬಂದ ಪ್ರತಿಯೊಂದು ಶಿಕ್ಷಕರನ್ನು ಸ್ಮರಿಸಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದರೆ ಯಶಸ್ಸು ಖಂಡಿತ ಸಾಧ್ಯ ಎಂದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾ ಪ್ರಭಾ ಎನ್. ನಾಯಕ್ ಮಾತನಾಡಿ, ಯಾವುದೇ ನಿರೀಕ್ಷೆಯಿಲ್ಲದೆ ಕಲಿಸುವವರು ಶಿಕ್ಷಕರು. ಆದರೆ ಸಮಾಜದಲ್ಲಿ ಶಿಕ್ಷಕರು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಾಂಧವ್ಯ ಉತ್ತಮವಾಗಿರಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ತರತಮಭಾವವಿಲ್ಲದೆ ಸಮಾನವಾಗಿ ನೋಡುತ್ತಾರೆ. ಶಿಕ್ಷಕರಿಲ್ಲದೆ ನಾವು ಉತ್ತಮ ಮನುಷ್ಯ ಮತ್ತು ನಾಗರಿಕರಾಗಲು ಖಂಡಿತ ಸಾಧ್ಯವಿಲ್ಲ. ತಂದೆತಾಯಿಗಳಂತೆ ಗುರುಗಳು ಸಹ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿವಹಿಸುತ್ತಾರೆ ಎಂದರು.
ಡಾ.ಕಿಶೋರ್ ಶೆಟ್ಟಿಯವರ ಜೀವಮಾನದ ಸಾಧನೆ ಮಾತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಾಗಿ ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ವಾಸ್ತುಶಿಲ್ಪತಜ್ಞೆಯಾದ ದೀಪಿಕಾ ಎ.ನಾಯಕ್ ಹಾಗೂ ಯೋಜನಾ ನಿರ್ವಹಣಾಧಿಕಾರಿ ಸಂದೇಶ್‌ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್‌ಖಾನ್, ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್.ನಾಯಕ್, ಪ್ರಾಂಶುಪಾಲ ಪ್ರೊ. ರಾಮಚಂದ್ರಭಟ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ. ನಾಯಕ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಾದ ತೇಜಸ್‌ಕುಮಾರ್, ರಿಯಾ ಮಾಥ್ಯೂ, ಪೃಥ್ವಿ, ನೇಹಾ ಹಾಗೂ ಇಶಾ ಕಾರ್ಯಕ್ರಮ ನಿರೂಪಿಸಿದರು.