ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಮನಸ್ಥಿತಿಗೆ ಅನುಗುಣವಾಗಿ ಶಿಕ್ಷಕರು ಮತ್ತು ಹೆತ್ತವರು ಬದಲಾಗಬೇಕು- ಡಾ. ನಿಕೇತನ

ಉದ್ಯಾವರ: ಇಂದಿನ ಆಧುನಿಕ ಕಾಲದಲ್ಲಿ ಮಕ್ಕಳ ಮನಸ್ಥಿತಿ ಬದಲಾಗಿದೆ. ಅದರಲ್ಲೂ ಕೋವಿಡ್ – 19 ರಿಂದಾಗಿ ಮಕ್ಕಳು ತಂತ್ರಜ್ಞಾನಕ್ಕೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಜಗತ್ತೇ ಒಂದು ಹಳ್ಳಿಯಾಗಿರುವ ಜಾಗತೀಕರಣದ ಸಂದರ್ಭದಲ್ಲಿ ಮಕ್ಕಳ ಮನಸ್ಥಿತಿಯು ಅದಕ್ಕೆ ಅನುಗುಣವಾಗಿ ಬೆಳೆಯುತ್ತಿದೆ. ಈ ಸನ್ನಿವೇಶದಲ್ಲಿ ಶಿಕ್ಷಕರು ಮತ್ತು ಹೆತ್ತವರು ಕೂಡಾ ತಮ್ಮ ಮನೋಭಾವವನ್ನು ನವೀಕರಿಸಿಕೊಳ್ಳ ಬೇಕಾಗಿದೆ. ಇಲ್ಲವಾದಲ್ಲಿ ಮಕ್ಕಳ ಮನಸ್ಥಿತಿಯೊಂದಿಗೆ ಶಿಕ್ಷಕರ ಮನಸ್ಥಿತಿ ಘರ್ಷಿಸುವ ಹಂತ ತಲುಪಿದರೆ ಇದು ಮಕ್ಕಳ ಮನಸ್ಥಿತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಿ ಅವರ ಶಿಕ್ಷಣ ಕುಂಠಿತವಾಗುವ ಅಪಾಯವಿದೆ  ಎಂದು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಹೇಳಿದರು.

ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವರ್ಷದ ಹರ್ಷ ನೂರರ್ವತ್ತೊಂದು ಸಮಾರಂಭದಲ್ಲಿ 5 ರಿಂದ 7 ನೇ ತರಗತಿವರೆಗಿನ ಮಕ್ಕಳಿಗೆ ಬಹುಮಾನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.

ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರು ಎಚ್ಚರಿಕೆಯಿಂದ ತಮ್ಮ ನಡೆಯನ್ನು ಇಡಬೇಕಾಗಿದೆ. ಶಿಕ್ಷಕರು ಮಾನವೀಯ ಮೌಲ್ಯ ಕಳಕೊಂಡರೆ ಮಾನವೀಯ ಮೌಲ್ಯವಿರದ ಸಮಾಜ ನಿರ್ಮಾಣವಾಗುತ್ತದೆ. ಶಿಕ್ಷಕರದ್ದು ಒತ್ತಡದ ಬದುಕು, ಈ ಒತ್ತಡದ ನಡುವೆ ಕೆಲಸ ಮಾಡಬೇಕಾದರೆ ಮಕ್ಕಳ ಮೇಲಿನ ಪ್ರೀತಿಯಿಂದ ಈ ವೃತ್ತಿಗೆ ಬರಬೇಕು. ಹೆತ್ತವರು ಕೂಡಾ ಜವಾಬ್ದಾರಿಯಿಂದ ವರ್ತಿಸಬೇಕು. ವಿದ್ಯಾರ್ಥಿಗಳಿಗೆ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯೂ ಮುಖ್ಯವಾಗುತ್ತದೆ. ಒಬ್ಬ ವಿದ್ಯಾರ್ಥಿಯನ್ನು ಬೆಳಸುವಲ್ಲಿ ಶಿಕ್ಷಕರು ನೀಡುವ ಮೌಲ್ಯ ಶಿಕ್ಷಣ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಈ ಶಾಲೆ ಅದಕ್ಕೆ ಒತ್ತು ಕೊಡುತ್ತಿರುವುದು ತಿಳಿದು ಬರುತ್ತಿದೆ ಎಂದರು.

ಶಾಲೆಯ ಹಳೆ ವಿದ್ಯಾರ್ಥಿ, ಲೆಕ್ಕ ಪರಿಶೋಧಕ ಸಿಎ ಸುಭಾಶ್ಚಂದ್ರ ಸಾಲ್ಯಾನ್ ಸಮಾರಂಭದಲ್ಲಿ ಶುಭಾಶಂಸನೆಗೈದು ಮಾತನಾಡಿ, ಶಿಕ್ಷಣ ಎಂಬುದು ಜೀವನದಲ್ಲಿ ಬಹು ಮುಖ್ಯವಾದುದು. ಅನಾದಿ ಕಾಲದಿಂದ ಭೂಮಿ ಸಮತ್ತಟ್ಟಾಗಿದೆ, ಸೂರ್ಯ ಭೂಮಿಯ ಸುತ್ತ ತಿರುಗುತ್ತದೆ ಎಂದು ನಂಬಿರುವ ಜನರು ಶಿಕ್ಷಿತರಾದಂತೆ ಅಭಿಪ್ರಾಯವೇ ಬದಲಾಗಿ ಸತ್ಯದ ದರ್ಶನವಾಯಿತು. ಭೂಮಿ ಗುಂಡಗಿದೆ ಮತ್ತು ಭೂಮಿ ಸೂರ್ಯನ ಸುತ್ತ ಸುತ್ತುತ್ತಿದೆ ಎಂಬ ಅರಿವು ಮೂಡಿತು ಇದು ಶಿಕ್ಷಣದ ಶಕ್ತಿ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆ ಕೂಡ ಅತಿ ಮುಖ್ಯ. ಸಂಸ್ಥೆಯು ಖಾಯಂ ಶಿಕ್ಷಣವನ್ನು ಕೊಡುತ್ತಿರಬೇಕಾದರೆ ಪೋಷಕರ ಪ್ರೋತ್ಸಾಹ ಅತಿ ಮುಖ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನೀಲ್ ಸಾಲ್ಯಾನ್ ಕಡೆಕಾರ್ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯ ಗಣಪತಿ ಕಾರಂತ್ , ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಡಾ. ತ್ರಿವೇಣಿ ವೇಣುಗೋಪಾಲ್ ,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಣೇಶ ಕುಮಾರ್ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಸುರೇಶ್ ಶೆಣೈ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯೆ ಶ್ರೀಮತಿ ಹೇಮಲತಾ ವರದಿ ವಾಚಿಸಿದರು. ವಿದ್ಯಾರ್ಥಿ ವೇತನದ ಪಟ್ಟಿಯನ್ನು ಶಿಕ್ಷಕಿ ಶ್ರೀಮತಿ ಅನುರಾಧ ಶೆಟ್ಟಿ ಮತ್ತು ಬಹುಮಾನದ ಪಟ್ಟಿಯನ್ನು ಶಿಕ್ಷಕಿ ಸುಪ್ರಿಯ ವಾಚಿಸಿದರು, ಶಿಕ್ಷಕಿ ಶ್ರೀಮತಿ ನಾಜಿರಾ ವಂದಿಸಿದರು. ಶಿಕ್ಷಕ ವಿಕ್ರಮ ಆಚಾರ್ಯ ನಿರೂಪಿಸಿದರು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಮತ್ತು ಮಕ್ಕಳ ನಾಟಕ “ಬೆಳಕು ಹಂಚಿದ ಬಾಲಕ ” ( ರಚನೆ : ಆರ್.ವಿ . ಭಂಡಾರಿ , ನಿರ್ದೇಶನ : ಉದ್ಯಾವರ ನಾಗೇಶ್ ಕುಮಾರ್, ಸಹ ನಿರ್ದೇಶನ: ಯು.ಯಜ್ಞೇಶ್ವರ ಆಚಾರ್ಯ) ನಾಟಕ ಪ್ರದರ್ಶನ ಗೊಂಡಿತು.