ಅ.1 ರಿಂದ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚನೆ ವರ್ಕ್​ ಫ್ರಂ ಹೋಮ್​ ನಿಲ್ಲಿಸಿದ ಟಿಸಿಎಸ್

ಬೆಂಗಳೂರು : ವರ್ಕ್​​ ಫ್ರಂ ಹೋಮ್ ಅಥವಾ ಹೈಬ್ರಿಡ್​ ಕೆಲಸವನ್ನು ಅಂತ್ಯಗೊಳಿಸಲಾಗಿದೆ ಎಂದು ಉದ್ಯೋಗಿಗಳಿಗೆ ಕಳುಹಿಸಲಾದ ಆಂತರಿಕ ಇಮೇಲ್​ನಲ್ಲಿ ಕಂಪನಿ ತಿಳಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದಾಗ್ಯೂ ತೀರಾ ಅಗತ್ಯದ ಸಂದರ್ಭಗಳಲ್ಲಿ ಹೈಬ್ರಿಡ್​ ಮಾದರಿಯ ಕೆಲಸಕ್ಕೆ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅಥವಾ ಹೈಬ್ರಿಡ್​ ಮಾದರಿಯ ಕೆಲಸವನ್ನು ಸಂಪೂರ್ಣವಾಗಿ ತೆಗೆದುಹಾಕಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)​, ಅಕ್ಟೋಬರ್ 1 ರಿಂದ ಎಲ್ಲಾ ಉದ್ಯೋಗಿಗಳು ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ತಿಳಿಸಿದೆ ಎಂದು ವರದಿಯಾಗಿದೆ.ಟಿಸಿಎಸ್​ ತನ್ನ ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಮ್​ ಕೆಲಸವನ್ನು ನಿಲ್ಲಿಸುತ್ತಿದೆ ಎಂದು ವರದಿಯಾಗಿದೆ.

“ವಿವಿಧ ಟೌನ್ ಹಾಲ್​ ಮೀಟಿಂಗ್​ಗಳಲ್ಲಿ ಕಂಪನಿಯ ಸಿಇಒ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್​ಒ) ತಿಳಿಸಿದಂತೆ, ಎಲ್ಲಾ ಉದ್ಯೋಗಿಗಳು ಅಕ್ಟೋಬರ್ 1, 2023 ರಿಂದ ಎಲ್ಲಾ ಕೆಲಸದ ದಿನಗಳಲ್ಲಿ (ರಜಾದಿನಗಳಿಲ್ಲದಿದ್ದರೆ ವಾರದಲ್ಲಿ 5 ದಿನಗಳು) ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿದೆ” ಎಂದು ಇಮೇಲ್​ನಲ್ಲಿ ಹೇಳಲಾಗಿದೆ. ವರದಿಯ ಪ್ರಕಾರ, ಇಮೇಲ್ ಅನ್ನು ಎಲ್ಲಾ ವಿಭಾಗಗಳಿಗೆ ಕಳುಹಿಸಲಾಗಿಲ್ಲ. ಸದ್ಯ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಕಂಪನಿ, ಮೌನಕ್ಕೆ ಶರಣಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅತಿದೊಡ್ಡ ಬಹುರಾಷ್ಟ್ರೀಯ ಐಟಿ ಸೇವೆ ಮತ್ತು ಸಲಹಾ ಕಂಪನಿಗಳಲ್ಲಿ ಒಂದಾಗಿದೆ. ಇದು ಭಾರತದ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿಯೂ ಜಾಗತಿಕವಾಗಿ ಕಚೇರಿಗಳನ್ನು ಹೊಂದಿದೆ. ಟಿಸಿಎಸ್ ಇ-ಆಡಳಿತ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ದೂರಸಂಪರ್ಕ, ಶಿಕ್ಷಣ ಮತ್ತು ಆರೋಗ್ಯ ಮಾರುಕಟ್ಟೆಗಳಲ್ಲಿ ಹೆಸರುವಾಸಿಯಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 1968 ರಲ್ಲಿ ಸ್ಥಾಪನೆಯಾಗಿದ್ದು, ಭಾರತದ ಮೊದಲ ಐಟಿ ಕಂಪನಿಗಳಲ್ಲಿ ಒಂದಾಗಿದೆ. 2004 ರಲ್ಲಿ, ಟಿಸಿಎಸ್ ಸಾರ್ವಜನಿಕ ಕಂಪನಿಯಾಗಿ ಮಾರ್ಪಟ್ಟಿತು. ಅಂದಿನಿಂದ ಇದು ಭಾರತದ ಅತಿದೊಡ್ಡ ಮತ್ತು ಅತ್ಯಂತ ಲಾಭದಾಯಕ ಕಂಪನಿಗಳಲ್ಲಿ ಒಂದಾಗಿದೆ.ಜೂನ್​ 30ರ ಹೊತ್ತಿಗೆ ಕಂಪನಿಯಲ್ಲಿ ಸುಮಾರು 6,15,318 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಈ ಮುನ್ನ ಉದ್ಯೋಗಿಗಳು ವಾರಕ್ಕೆ ಮೂರು ದಿನ ಕಚೇರಿಗೆ ಹಾಜರಾಗುವುದು ಕಡ್ಡಾಯವಾಗಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ, ಟಿಸಿಎಸ್​ನ ಆಗಿನ ಸಿಇಒ ರಾಜೇಶ್ ಗೋಪಿನಾಥನ್ ಅವರು 2025 ರ ವೇಳೆಗೆ ಶೇಕಡಾ 25 ರಷ್ಟು ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆತರುವ ಗುರಿಯೊಂದಿಗೆ 25×25 ಮಾದರಿಯನ್ನು ರೂಪಿಸಿದ್ದರು.