ವಿಸ್ಟ್ರಾನ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಮೊದಲ ಭಾರತೀಯ ಐಫೋನ್ ತಯಾರಿಕ ಕಂಪನಿಯಾಗಲಿದೆ ಟಾಟಾ

ಬೆಂಗಳೂರು: ಭಾರತದ ಅತಿದೊಡ್ಡ ಸಂಘಟಿತ ಸಂಸ್ಥೆಯಾದ ಟಾಟಾ ಗ್ರೂಪ್, ಆಗಸ್ಟ್‌ನಲ್ಲಿ ಆಪಲ್ ಪೂರೈಕೆದಾರರ ಕಾರ್ಖಾನೆಯನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಹತ್ತಿರದಲ್ಲಿದೆ. ಇದೇ ಮೊದಲನೆ ಬಾರಿಗೆ ಸ್ಥಳೀಯ ಕಂಪನಿಯೊಂದು ಐಫೋನ್‌ಗಳ ಜೋಡಣೆಯನ್ನು ಕರ್ನಾಟಕದಲ್ಲಿ ಮಾಡಲಿದೆ ಎಂದು ವರದಿಯಾಗಿದೆ.

600 ಮಿಲಿಯನ್ ಡಾಲರ್ (ಸುಮಾರು ರೂ. 4,900 ಕೋಟಿ) ಗಿಂತ ಹೆಚ್ಚು ಮೌಲ್ಯದ ವಿಸ್ಟ್ರಾನ್ ಕಾರ್ಖಾನೆಯನ್ನು ಟಾಟಾ ಗ್ರೂಪ್ ಸುಮಾರು ಒಂದು ವರ್ಷದ ಮಾತುಕತೆಗಳ ಬಳಿಕ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಬಲ್ಲ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.

ಇತ್ತೀಚಿನ iPhone 14 ಮಾದರಿಯನ್ನು ಜೋಡಿಸುವ ಈ ಕಂಪನಿಯು 10,000 ಕ್ಕೂ ಹೆಚ್ಚು ಕೆಲಸಗಾರರನ್ನು ನೇಮಿಸಿಕೊಂಡಿದೆ.

ರಾಜ್ಯ-ಬೆಂಬಲಿತ ಹಣಕಾಸು ಪ್ರೋತ್ಸಾಹವನ್ನು ಪಡೆಯಲು ಮಾರ್ಚ್ 2024 ರವರೆಗಿನ ವಿತ್ತೀಯ ವರ್ಷದಲ್ಲಿ ವಿಸ್ಟ್ರಾನ್ ಕಂಪನಿಯು ಕನಿಷ್ಠ $1.8 ಬಿಲಿಯನ್ (ಸುಮಾರು ರೂ. 14,800 ಕೋಟಿ) ಮೌಲ್ಯದ ಐಫೋನ್‌ಗಳನ್ನು ಫ್ಯಾಕ್ಟರಿಯಲ್ಲಿ ಜೋಡಿಸಿ ರವಾನಿಸಲಿದೆ. ಮುಂದಿನ ವರ್ಷದ ವೇಳೆಗೆ ಘಟಕದ ಉದ್ಯೋಗಿಗಳನ್ನು ಮೂರು ಪಟ್ಟು ಹೆಚ್ಚಿಸುವ ಯೋಜನೆಯೂ ಇದೆ. ಭಾರತದಲ್ಲಿ ವಿಸ್ಟ್ರಾನ್ ಐಫೋನ್ ವ್ಯವಹಾರದಿಂದ ನಿರ್ಗಮಿಸುತ್ತಿದ್ದಂತೆ ಟಾಟಾ ಈ ಬದ್ಧತೆಯನ್ನು ಪೂರೈಸಲು ಸಿದ್ಧವಾಗಿದೆ.

ಚೀನಾ ದೇಶದ ಕೋವಿಡ್ ಲಾಕ್‌ಡೌನ್‌ಗಳು ಮತ್ತು ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಳಿಕ ಆಪಲ್ ಸಂಸ್ಥೆಯು ಚೀನಾದಿಂದ ಹೊರಗೆ ವಿಶೇಷವಾಗಿ ದಕ್ಷಿಣ ಏಷ್ಯಾ ಮತ್ತು ಭಾರತದಂತಹ ರಾಷ್ಟ್ರಗಳಲ್ಲಿ ತನ್ನ ಮೊಬೈಲ್ ಜೋಡಣೆಯ ಕಾರ್ಖಾನೆಗಳನ್ನು ಸ್ಥಾಪಿಸುತ್ತಿದೆ.

ಜೂನ್ 30 ರವರೆಗೆ ವಿಸ್ಟ್ರಾನ್ ಕಂಅಪನಿಯು ಭಾರತದಿಂದ ಸುಮಾರು $500 ಮಿಲಿಯನ್ (ಸುಮಾರು ರೂ. 4,100 ಕೋಟಿ) ಮೊತ್ತದ ಐಫೋನ್‌ಗಳನ್ನು ರಫ್ತು ಮಾಡಿದೆ.

ಐಫೋನ್‌ಗಳನ್ನು ತಯಾರಿಸುವ ಭಾರತೀಯ ಕಂಪನಿಯು ಚೀನಾ ದೇಶದ ‘ವಿಶ್ವದ ಕಾರ್ಖಾನೆ’ ಎಂಬ ಸ್ಥಾನಮಾನವನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಇಂಬು ನೀಡಬಹುದು ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತದಲ್ಲಿ ಉತ್ಪಾದನೆಯನ್ನು ಪರಿಗಣಿಸಲು ಇತರ ಜಾಗತಿಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ಗಳ ಮನವೊಲಿಸಬಹುದು.

155 ವರ್ಷಗಳಷ್ಟು ಹಳೆಯದಾದ ಟಾಟಾ ಗ್ರೂಪ್ ಉಪ್ಪಿನಿಂದ ಹಿಡಿದು ತಂತ್ರಜ್ಞಾನ ಸೇವೆಗಳವರೆಗೆ ಎಲ್ಲವನ್ನೂ ಮಾರಾಟ ಮಾಡುತ್ತಿದೆ. ಕಳೆದ ಕೆಲವು ವರ್ಷಗಳಿಂದ, ಟಾಟಾ ಕುಟುಂಬಕ್ಕೆ ತುಲನಾತ್ಮಕವಾಗಿ ಹೊಸ ಪ್ರದೇಶಗಳಾದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಇ-ಕಾಮರ್ಸ್‌ ಸೇವೆಗಳಿಗೂ ಕಂಪನಿ ಪ್ರವೇಶಿಸಿದೆ.